ಹಾವೇರಿ: ಕಳೆದ ಕೆಲವು ದಿನಗಳಿಂದ ಬೀದಿಯಲ್ಲಿ ವಾಸಮಾಡುತ್ತಿದ್ದ ವೃದ್ದೆಗೆ ಪಿಎಸ್‍ಐಯೊಬ್ಬರು ಚಿಕಿತ್ಸೆ ಕೊಡಿಸಿ ವೃದ್ದಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ 65 ವರ್ಷದ ವೃದ್ಧೆಯೊಬ್ಬಳು ಅನಾಥವಾಗಿ ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ಡಿ.ಕೆ.ಬಳಿಗಾರವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ವೃದ್ದೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ವಿಚಾರಣೆ ವೇಳೆ ವೃದ್ಧೆಯನ್ನು ಗೌರಮ್ಮ ಸಣ್ಮನಿ(65) ಎಂದು ಗುರುತಿಸಲಾಗಿದೆ. ಬಳಿಕ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಶಿಗ್ಗಾಂವಿ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದರು. ಗೌರಮ್ಮಳ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಮರಣದ ನಂತರ ಗೌರಮ್ಮ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ಅನಾಥೆಯಂತೆ ಜೀವನ ಸಾಗಿಸುತ್ತಿದ್ದಳು. ಮಾಹಿತಿದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಬಳಿಗಾರ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ಗೌರಮ್ಮಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಆದರೆ ಯಾವುದಾದರೂ ಕಾರಣಕ್ಕೆ ಗೌರಮ್ಮನೇ ಸ್ವತಃ ಮನೆಬಿಟ್ಟು ಬಂದು ಅಲ್ಲಿ ಇಲ್ಲಿ ವಾಸ ಮಾಡಿಕೊಂಡಿದ್ದಾಳೋ ಅಥವಾ ಮಕ್ಕಳೇ ವೃದ್ದೆಯನ್ನು ಆರೈಕೆ ಮಾಡಲಾಗದೆ ಮನೆಯಿಂದ ಹೊರಗೆ ಹಾಕಿದ್ದಾರೋ ಎಂದು ತಿಳಿದುಬಂದಿಲ್ಲ. ಗೌರಮ್ಮ ಮಾತ್ರ ಥೇಟ್ ಅನಾಥಳಂತೆ ಕಾಗಿನೆಲೆ ಗ್ರಾಮ ಸೇರಿದಂತೆ ಅಲ್ಲಲ್ಲಿ ವಾಸವಾಗಿದ್ದಳು. ಆದರೆ ಪಿಎಸ್‍ಐ ಡಿ.ಕೆ.ಬಳಿಗಾರ ವೃದ್ದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪಿಎಸ್ ಐ ಬಳಿಗಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.