ಬೀದರ್: ಮಹಾರಾಷ್ಟ್ರದಿಂದ ವಾಪಸಾದವರಿಂದ ಕೊರೊನಾ ಸೋಂಕು ಕಂಟಕವಾಗಿ ಪರಿಣಮಿಸಿದ್ದು, ಗಡಿ ಜಿಲ್ಲೆಯಲ್ಲಿ ಇಂದು ಮತ್ತೆ 12 ಜನ ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 12 ಹೊಸ ಪ್ರಕರಣ ಪತ್ತೆಯಾದ ಹಿನ್ನೆಲೆ ಜಿಲ್ಲೆಯ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಬಸವಕಲ್ಯಾಣ ತಾಲೂಕಿನ ಕೊಹಿನೂರು, ಶಿರಗುರ, ಗದಲೆಗಾಂವ್(ಕೆ), ಬಟಗೇರಾ, ಲಾಡವಂತಿ ಹಾಗೂ ಅಟ್ಟೂರ ಗ್ರಾಮಗಳಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದೆ. ಎಲ್ಲರೂ ಮಹಾರಾಷ್ಟ್ರದ ಮುಂಬೈಯಿಂದ ವಾಪಸಾದವರಾಗಿದ್ದು, ಇವರೆಲ್ಲರೂ ಸ್ಥಳೀಯ ಕ್ವಾರಂಟೈನ್‍ಗೆ ಒಳಗಾಗಿದ್ದರು.
ಬಸವಕಲ್ಯಾಣ ತಾಲೂಕಿನ ಶಿರಗುರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ 20 ವರ್ಷದ ಯುವಕ ರೋಗಿ ನಂ.2318 ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೊಸ ಪ್ರಕರಣಗಳು ಪತ್ತೆಯಾಗುವುದರ ಮಧ್ಯೆಯೇ ಇಂದು ಜಿಲ್ಲಾ ಕೊರೊನಾ ಆಸ್ಪತ್ರೆಯಲ್ಲಿ ಮೂವರು ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ತಲುಪಿದೆ. ಒಟ್ಟು 24 ಜನ ಗುಣಮುಖರಾದ್ದಾರೆ. ಈ ವರೆಗೆ ಒಟ್ಟು ಮೂವರು ಕೊರೊನಾಗೆ ಬಲಿಯಾಗಿದ್ದು, ಉಳಿದ 81 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.