ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಇಂದು ಎಂಟು ಜನರ ಬಲಿಯೊಂದಿಗೆ ಕೊರೊನಾ ಮಹಾಮಾರಿ ತನ್ನ ಸಾವಿನ ರಣಕೇಕೆ ಹಾಕಿದೆ.
ಬೀದರ್ ತಾಲೂಕಿನ 65 ಮತ್ತು 34 ವರ್ಷದ ಮಹಿಳೆಯರು ಹಾಗೂ 62 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಹುಮ್ನಬಾದ್ ತಾಲೂಕಿನ 65 ವರ್ಷದ ವ್ಯಕ್ತಿ ಹಾಗೂ 55 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣದ 60 ವರ್ಷದ ವ್ಯಕ್ತಿ, ಔರಾದ್ ತಾಲೂಕಿನ 62 ವರ್ಷದ ವ್ಯಕ್ತಿ ಹಾಗೂ ಭಾಲ್ಕಿ ಪಟ್ಟಣದ 24 ವರ್ಷದ ಯುವಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ಎಂಟು ಜನರಿಗೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ. ಎಂಟು ಜನರ ಬಲಿಯೊಂದಿಗೆ ಜಿಲ್ಲೆಯಲ್ಲಿ ಇಂದು 99 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಬೀದರಿನಲ್ಲಿ 44, ಬಸವಕಲ್ಯಾಣದಲ್ಲಿ 30, ಹುಮ್ನಬಾದ್‍ನಲ್ಲಿ 10, ಭಾಲ್ಕಿಯಲ್ಲಿ 9, ಔರಾದ್‍ನಲ್ಲಿ 6 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,748ಕ್ಕೆ ಏರಿಕೆಯಾಗಿದೆ. ಇದರಲ್ಲಿ 2,571 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. 1,057 ಜನರಿಗೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 116 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.