– ಶಾಲೆ ಉಳಿವಿಗಾಗಿ ಟೊಂಕ ಕಟ್ಟಿ ನಿಂತ ಹಳೆ ವಿದ್ಯಾರ್ಥಿಗಳು
ಚಿಕ್ಕಮಗಳೂರು: ಶೃಂಗೇರಿ ಮಠದ 34ನೇ ಜಗದ್ಗುರುಗಳಾದ ಚಂದ್ರಶೇಖರ ಭಾರತೀ ಶ್ರೀಗಳು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ. 1900 ಇಸವಿಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಶ್ರೀಗಳು ಮುಂದಿನ ದಿನಗಳಲ್ಲಿ ಶೃಂಗೇರಿ ಮಠದ ಜಗದ್ಗುರುಗಳಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಅಜರಾಮರವಾದರು. ವಿಶ್ವದ ಉದ್ದಗಲಕ್ಕೂ ಖ್ಯಾತಿಯಾದರು. ಅದೆಲ್ಲಾ ಒಂದು ತಪ್ಪಸ್ಸು ಹಾಗೂ ಇತಿಹಾಸ. ಆದರೆ ಇಂದು ಅವರು ಆಡಿ-ಬೆಳೆದು ಓದಿದ ಸರ್ಕಾರಿ ಕನ್ನಡ ಶಾಲೆಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ.
ಈ ಶಾಲೆ ಆರಂಭವಾಗಿದ್ದು 1853ನೇ ಇಸವಿಯಲ್ಲಿ. ಈ ಶಾಲೆಗೆ ಸುಮಾರು 168 ವರ್ಷಗಳ ಇತಿಹಾಸವಿದೆ. ಈ ಶಾಲೆಯ ದಾಖಲಾತಿ ಪುಸ್ತಕದಲ್ಲಿ ಶ್ರೀಗಳ ಹೆಸರೂ ಕೂಡ ಇದೆ. ಶ್ರೀ ಜಗದ್ಗುರು ಚಂದ್ರಶೇಖರ ಭಾರತಿಗಳು ಈ ಶಾಲೆಯಲ್ಲಿ ಅಂದಾಜು 1900ನೇ ಇಸವಿಯಲ್ಲಿ ಓದಿದ್ದಾರೆ. ಅವರ ಪೂರ್ಣನಾಮ ನರಸಿಂಹ. ತಂದೆ ವಿದ್ವಾನ್ ಗೋಪಾಲಶಾಸ್ತ್ರಿ ತಾಯಿ ಲಕ್ಷ್ಮಮ್ಮ. ಅವರು ಹುಟ್ಟಿದ ವರ್ಷ 1892. ದಾಖಲೆಗಳು ಕಳೆದು ಹೋಗಿವೆ ಎಂದು ಇಂದಿಗೂ 130 ವರ್ಷಗಳ ಹಿಂದಿನ ದಾಖಲಾತಿ ಪುಸ್ತಕದ ಮೇಲ್ಭಾಗದಲ್ಲೇ ಬರೆದು ಜೋಪಾನವಾಗಿ ಇಟ್ಟಿದ್ದಾರೆ. ಶೃಂಗೇರಿ ಮಠ ಅಂದ್ರೆ ದೇಶ-ವಿದೇಶದ ಉದ್ದಗಲಕ್ಕೂ ಪೂಜ್ಯ ಭಾವನೆ. ಮಠದ ಶ್ರೀಗಳು ಇಟ್ಟ ಒಂದೊಂದು ಹೆಜ್ಜೆಯೂ ನೆನಪಿನ ಬುತ್ತಿ. ಆದರೆ ಸರ್ಕಾರ ಇಂತಹಾ ಜೀವಂತ ದಂತಕಥೆಯ ಶಾಲೆಗೆ ಬೀಗ ಹಾಕುವ ಕಾಲ ಸನ್ನಿಹಿತವಾಗಿದೆ.
ಶಾಲೆಯ ಈ ಸ್ಥಿತಿಗೆ ಎರಡು ಕಾರಣ: ಆರಂಭದಲ್ಲಿ ಶ್ರೀಗಳು ಓದುವಾಗ ಈ ಶಾಲೆಯಲ್ಲಿ ಸಾವಿರಾರು ಮಕ್ಕಳಿದ್ದರು. 168 ವರ್ಷಗಳಲ್ಲಿ ಲಕ್ಷಾಂತರ ಮಕ್ಕಳು ಬದುಕು ರೂಪಿಸಿಕೊಂಡಿದ್ದಾರೆ. ವಿವಿಧ ಉನ್ನತ ಹುದ್ದೆಗೇರಿದ್ದಾರೆ. ಇಂದು ಈ ಶಾಲೆಯಲ್ಲಿ ಇರೋದು ಕೇವಲ 16 ಜನ ಮಕ್ಕಳು. ಶಿಕ್ಷಕರ ಶ್ರಮ ಹಾಗೂ ಹೋರಾಟದ ಫಲವಾಗಿ ನಾಲ್ಕು ಜನ ಸೇರ್ಪಡೆಯಾಗಿದ್ದಾರೆ. ಈ ದಂತಕಥೆಯ ಶಾಲೆಯ ಇಂದಿನ ಸ್ಥಿತಿಗೆ ಕಾರಣ ಎರಡು. ಒಂದು, ಹೆತ್ತವರ ಇಂಗ್ಲಿಷ್ ವ್ಯಾಮೋಹ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮತ್ತೊಂದು, ಸರ್ಕಾರಿ ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಶಾಲೆಗೆ ಅನುಮತಿ ನೀಡಬಾರದೆಂಬ ಸರ್ಕಾರದ ಆದೇಶದ ಮಧ್ಯೆಯೂ ಈ ಶಾಲೆಯ 100-200 ಮೀಟರ್ ದೂರದಲ್ಲಿ ಎರಡು ಖಾಸಗಿ ಶಾಲೆಗೆ ಅನುಮತಿ ನೀಡಿರೋದು. ಈ ಶಾಲೆಯ ಇಂದಿನ ಈ ಸ್ಥಿತಿಗೆ ಅಧಿಕಾರಿ ವರ್ಗ ಕೂಡ ಕಾರಣವಾಗಿದೆ.
ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ: ಹಿಂದೊಮ್ಮೆ ಈ ಶಾಲೆಯನ್ನ ಮುಚ್ಚಲು ಮುಂದಾಗಿದ್ದರು. ಸ್ಥಳಿಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಶ್ರೀಗಳ ನೆನಪಿಗಾಗಿ ಉಳಿಸಿದ್ದರು. 2016ರಲ್ಲಿ ಈ ಶಾಲೆಯನ್ನ ಬಾಲಕಿಯರ ಶಾಲೆ ಜೊತೆ ವಿಲೀನ ಮಾಡಲು ಸರ್ಕಾರ ಚಿಂತಿಸಿತ್ತು. ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಾಲಕರ ಶಾಲೆಯಾಗೇ ಉಳಿದಿದೆ. ಇಂತಹ ಶಾಲೆಯನ್ನ ಮುಚ್ಚಲು ಅಥವ ಮರ್ಜ್ ಮಾಡಲು ಯೋಚಿಸೋ ಸರ್ಕಾರಕ್ಕೆ ಈ ನೆನಪಿನ ಬುತ್ತಿಯನ್ನ ಉಳಿಸೋ ಮನಸ್ಸಿಲ್ಲ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಕೂಡ ಹೊರಹಾಕಿದ್ದಾರೆ. ಹೆತ್ತವರ ಇಂಗ್ಲಿಷ್ ಪ್ರೀತಿ ಕೂಡ ಶಾಲೆಯ ಈ ದುಸ್ಥಿತಿಗೆ ಕಾರಣವಾಗಿದೆ.
ಶಾಲೆ ಉಳಿವಿಗಾಗಿ ಟೊಂಕ ಕಟ್ಟಿ ನಿಂತ ಹಳೆ ವಿದ್ಯಾರ್ಥಿಗಳು:
ಸ್ಥಳೀಯರು, ಹಳೇ ವಿಧ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಕ ವೃಂದ ಹಾಗೂ ಎಡಿಎಂಸಿ ಸದಸ್ಯರು ಈಗ ಮತ್ತೆ ಶಾಲೆಗೆ ಮರುಜೀವ ನೀಡಲು ಮುಂದಾಗುತ್ತಿದ್ದಾರೆ. ಸುಣ್ಣ-ಬಣ್ಣ ಹೊಡೆಸಿ ಶ್ರೀಗಳ ನೆನಪಿಗಾಗಿ ಈ ಶಾಲೆಯ ಹೊಸ ಶಕೆಗೆ ನಾಂದಿ ಹಾಡಲು ಸಿದ್ಧತೆ ನಡೆಸಿದ್ದಾರೆ. ಅಧಿಕಾರಿಗಳು ಕೂಡ ಕೂಡ ಶಾಲೆಯನ್ನ ಮುಚ್ಚಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರು ಕೂಡ ಸರ್ಕಾರಕ್ಕೆ ಇದು ಬರೀ ಶಾಲೆಯಷ್ಟೆ. ನಮಗೆ ಜ್ಞಾನದ ದೇಗುಲ. ಶ್ರೀಗಳ ನೆನಪು. ಈ ಶಾಲೆಯ ಅಭಿವೃದ್ಧಿಗೆ ನಾವು ಸದಾ ಸಿದ್ಧ ಎಂದು ಶಾಲೆ ಉಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ.
ವಿಶ್ವದ ಉದ್ಧಗಲಕ್ಕೂ ಶಂಕರಾಚಾರ್ಯರು, ಶೃಂಗೇರಿ ಮಠ ಅಂದ್ರೆ ಪೂಜ್ಯ ಭಾವನೆ. ಶೃಂಗೇರಿ ಶ್ರೀಗಳು ಇಟ್ಟ ಒಂದೊಂದು ಹೆಜ್ಜೆಯೂ ಒಂದೊಂದು ನೆನಪಿನ ಬುತ್ತಿ. ಇತಿಹಾಸ. ಜೀವಂತ ದಂತಕಥೆ. ಅವುಗಳನ್ನ ಉಳಿಸಿಕೊಳ್ಳಬೇಕೇ ವಿನಃ ಸೃಷ್ಠಿಸಲಾಗಲ್ಲ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರತಿಮೆ-ರಸ್ತೆ ಮಾಡಿ ಅದಕ್ಕೆ ಒಬ್ಬೊಬ್ಬರ ಹೆಸರಿಟ್ಟು ವಸ್ತುಗಳಲ್ಲಿ ವ್ಯಕ್ತಿಗಳನ್ನ ನೆನಪಿಸಿಕೊಳ್ಳುವ ಬದಲು ಶತಶತಮಾನಕ್ಕೂ ನೈಸರ್ಗಿಕ ಹಾಗೂ ಜೀವಂತ ಆ್ಯಂಟಿಕ್ ಪೀಸ್ ಆಗಿರೋ ಇಂತಹಾ ಕನ್ನಡ ಶಾಲೆಗಳನ್ನೇ ಉಳಿಸಿ ಅಭಿವೃದ್ಧಿಪಡಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಅನ್ನೋದು ಜಿಲ್ಲೆಯ ಜನರ ಆಸೆಯಾಗಿದೆ.