-ಜೆಡಿಯು ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ರಣರಂಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ- ಜೆಡಿಯು ಮೈತ್ರಿ ರಚಿಸಿಕೊಂಡು ಚುನಾವಣೆಯನ್ನ ಎದುರಿಸುತ್ತಿವೆ. ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಚುನಾವಣೆ ರ‌್ಯಾಲಿಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
Advertisement
ಕೊರೊನಾ ಹಿನ್ನೆಲೆ ಹೆಚ್ಚು ವರ್ಚುವಲ್ ರ‌್ಯಾಲಿಗಳು ನಡೆಯಲಿವೆ ಎನ್ನಲಾಗಿದೆ. ಕೆಲ ಸೀಮಿತ ಕ್ಷೇತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಬಿಜೆಪಿ ಮತ್ತು ಜೆಡಿಯು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಎಲ್ಲ ರ‌್ಯಾಲಿಗಳಲ್ಲಿ ಪ್ರಧಾನಿಗಳಿಗೆ ಸಿಎಂ ನಿತೀಶ್ ಕುಮಾರ್ ಸಾಥ್ ನೀಡಲಿದ್ದಾರೆ. ಮೊದಲ ಹಂತದ ಚುನಾವಣೆ ಕ್ಷೇತ್ರಗಳಿಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನ ಕಣಕ್ಕಿಳಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ.
Advertisement
Advertisement
ಒಂದು ವೇಳೆ ಪ್ರಧಾನಿ ಮೋದಿ ಜೆಡಿಯು ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಕೊಂಡ್ರೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಕೇಂದ್ರದಲ್ಲಿ ಎನ್‍ಡಿಎ ಒಕ್ಕೂಟಕ್ಕೆ ಬೆಂಬಲ ನೀಡಿರುವ ಎಲ್‍ಜೆಪಿ (ಲೋಕ್ ಜನಶಕ್ತಿ ಪಕ್ಷ) ಬಿಹಾರ ಚುನಾವಣೆಯಲ್ಲಿ ಏಕಾಂಗಿ ಕಣಕ್ಕಿಳಿದಿದೆ. ಬಿಜೆಪಿ-ಜೆಡಿಯು ಮೈತ್ರಿಯಿಂದ ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೊರ ಬಂದಿದ್ದಾರೆ. ಇನ್ನು ಜೆಡಿಯು ಹಿರಿಯ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಎಲ್‍ಜೆಪಿ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.
Advertisement
2015ರ ವಿಧಾನಸಭಾ ಚುನಾವಣೆ ಪ್ರಧಾನಿ ಮೋದಿ 31 ರ‌್ಯಾಲಿಗಳಲ್ಲಿ ಭಾಗಿಯಾಗಿದ್ದರು. ಬಿಹಾರದಲ್ಲಿ ಬಿಜೆಪಿ ಏಕಾಂಗಿಯಾಗಿ ಚುನಾವಣೆಯನ್ನ ಎದುರಿಸಿತ್ತು. ಹೀಗಾಗಿ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಭಾರೀ ಕಸರತ್ತು ನಡೆಸಿತ್ತು.
ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರು ಬಿಜೆಪಿ ಮತ್ತು ಜೆಡಿಯೂ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿದೆ. ಬಿಜೆಪಿ 121 ಮತ್ತು ಜೆಡಿಯು 122 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. 121 ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಪಕ್ಷ ವಿಕಾಸ್ ಇನ್ಸಾನ್ ಪಾರ್ಟಿಗೆ (ವಿಐಪಿ) 11 ಸೀಟು ಬಿಟ್ಟು ಕೊಡಲಿದೆ. ಇತ್ತ ಜೆಡಿಯು ಸಹ 122ರಲ್ಲಿ 7 ಕ್ಷೇತ್ರಗಳನ್ನು ಹಿಂದೂಸ್ತಾನ್ ಅವಾಮ್ ಮೋರ್ಚಾಗೆ ನೀಡಿದೆ.
ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 16 ಜಿಲ್ಲೆಯ 71 ಕ್ಷೇತ್ರಗಳಿಗೆ, 31 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, 17 ಜಿಲ್ಲೆಯ 94 ಕ್ಷೇತ್ರಗಳಿಗೆ 42 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಚುನಾವಣೆ ನವೆಂಬರ್ 7ರಂದು 15 ಜಿಲ್ಲೆಯ 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 33 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೂರು ಹಂತದ ಮತದಾನದ ಬಳಿಕ ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.