– ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಆಟಗಾರರ ಮೇಲೆ ಬೀಳುತ್ತದೆ
ಮುಂಬೈ: ಬಿಸಿಸಿಐ ಹಣಕ್ಕಾಗಿ ಆಟಗಾರರ ಜೀವವನ್ನೇ ಪಣಕ್ಕಿಟ್ಟು ಐಪಿಎಲ್ ಆಡಿಸಲು ಮುಂದಾಗಿದೆ ಎಂಬ ಟೀಕಾಕಾರರ ಪ್ರಶ್ನೆಗೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಆರ್ಥಿಕ ಪಾಠ ಮಾಡಿದ್ದಾರೆ.
ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸುತ್ತೇವೆ ಎಂದು ಬಿಸಿಸಿಐ ಹೇಳಿದ ತಕ್ಷಣ ಕೆಲ ಟೀಕಾಕಾರರು, ಬಿಸಿಸಿಐ ಸ್ವಾರ್ಥಿಯಾಗಿ ಯೋಚನೆ ಮಾಡುತ್ತಿದೆ. ಆಟಗಾರರ ಜೀವವನ್ನು ಪಣಕ್ಕಿಟ್ಟು, ಅವರ ಆರೋಗ್ಯವನ್ನು ಲೆಕ್ಕಿಸದೆ, ಕೇವಲ ಹಣಕ್ಕಾಗಿ ಐಪಿಎಲ್ ಮಾಡಲು ಮುಂದಾಗಿದೆ ಎಂದು ದೂರಿದ್ದರು. ಇದಕ್ಕೆ ಅರುಣ್ ಧುಮಾಲ್ ಅವರು ಉತ್ತರ ನೀಡಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾತನಾಡಿರುವ ಧುಮಾಲ್, ಹೌದು ಕೆಲವರು ಬಿಸಿಸಿಐ ಹಣದ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಟೀಕೆ ಮಾಡುತ್ತಾರೆ. ಆದರೆ ಟೀಕೆ ಮಾಡುವ ಯಾರೂ ಕೂಡ ಐಪಿಎಲ್‍ನಿಂದ ಆರ್ಥಿಕ ಲಾಭ ಎಷ್ಟಿದೆ ಎಂಬುದರ ಬಗ್ಗೆ ಒಂದು ನಿಮಿಷವೂ ಯೋಚನೆ ಮಾಡುವುದಿಲ್ಲ. ಐಪಿಎಲ್ ಕೇವಲ ಮನರಂಜನೆಯಲ್ಲ ಅದು ಕೂಡ ಒಂದು ವ್ಯವಹಾರ. ಜೊತೆಗೆ ಹಲವಾರು ವಿಭಾಗದಲ್ಲಿ ಸಾವಿರಾರು ಜನರಿಗೆ ಐಪಿಎಲ್‍ನಿಂದ ಕೆಲಸ ಸಿಗುತ್ತದೆ. ಆರ್ಥಿಕ ಮುಗ್ಗಟ್ಟು ಸರಿಹೋಗಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಒಂದು ವೇಳೆ ಐಪಿಎಲ್ ಆಡಿಸದ್ದಿದ್ದರೆ ಮುಂದೆ ಭಾರತದಲ್ಲಿ ಕ್ರಿಕೆಟಿಂಗ್ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಬಿಸಿಸಿಐಗೆ ಐಪಿಎಲ್ ಟೂರ್ನಿ ಹೆಚ್ಚು ಹಣವನ್ನು ತಂದು ಕೊಡುತ್ತದೆ. ಈ ಹಣದಿಂದಲೇ ಬಿಸಿಸಿಐ ವರ್ಷಕ್ಕೆ ಸುಮಾರು 2000 ದೇಶಿಯ ಪಂದ್ಯಗಳನ್ನು ಆಡಿಸುತ್ತದೆ. ಆದ್ದರಿಂದ ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಯುವ ಆಟಗಾರರ ಮೇಲೆ ಬೀಳುತ್ತದೆ. ಅದರ ಜೊತೆಗೆ ನಾವು ಐಪಿಎಲ್ ಆಡಿಸುವ ವೇಳೆ ಆಟಗಾರರ ಸುರಕ್ಷತೆ ಬಗ್ಗೆಯೂ ಗಮನ ನೀಡುತ್ತೇವೆ ಎಂದು ಧುಮಾಲ್ ತಿಳಿಸಿದ್ದಾರೆ.
ಈ ವರ್ಷ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆಯನ್ನು ಆಸ್ಟ್ರೇಲಿಯಾ ಮಾಡಬೇಕಿದೆ. ಅವರು ಟೂರ್ನಿಯನ್ನು ನಡೆಸುತ್ತೇವೆ ಎಂದರೆ ನಮಗೇನೂ ಅಭ್ಯಂತರವಿಲ್ಲ. ನಾವು ಆಡುತ್ತೇವೆ. ಆದರೆ ಒಂದು ವೇಳೆ ಅವರು ಟೂರ್ನಿಯನ್ನು ಆಯೋಜನೆ ಮಾಡಲು ಆಗಲ್ಲ ಎಂದರೆ ನಮಗೆ ತಿಳಿಸಬೇಕು. ಆಗ ನಾವು ಬೇರೆ ಏನಾದರೂ ಪ್ಲಾನ್‍ಗಳನ್ನು ರೂಪಿಸಿಕೊಳ್ಳುತ್ತೇವೆ ಎಂದು ಅರುಣ್ ಧುಮಾಲ್ ಟಿ-20 ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ.
ಈ ವಿಚಾರವಾಗಿ ಗುರುವಾರ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿಯವರು ಎಲ್ಲ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದು, ಐಪಿಎಲ್ ಅನ್ನು ಖಾಲಿ ಸ್ಟೇಡಿಯಂನಲ್ಲಿ ಆಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ ಎಂದು ಕೇಳಿದ್ದರು. ಜೊತೆಗೆ ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.