ಧಾರವಾಡ/ಹುಬ್ಬಳ್ಳಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಪ್ರಭು ಬಿರಾದಾರ ಬಂಧಿತ ವೈದ್ಯ. ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರು ಫಾರ್ಮಾಸಿಟಿಕಲ್ ಎಜೆನ್ಸಿಯ ಮಾಲೀಕರಾಗಿದ್ದು, ಪ್ರಭು ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದರು. ವಸ್ತುಗಳನ್ನು ಪಡೆದ ಪ್ರಭು ಹಣ ಪಾವತಿ ಮಾಡಿರಲಿಲ್ಲ. ಬಿಲ್ ಪಾವತಿ ಮಾಡಬೇಕಾದರೆ ಲಾಡ್ಜ್ ಗೆ ಬಾ ಎಂದು ಪ್ರಭು ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಜ್ಯೋತಿ ಆರೋಪಿಸಿದ್ದಾರೆ.
ಜ್ಯೋತಿ ತಮಗಾದ ಕೆಟ್ಟ ಅನುಭವವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರ ಆಸ್ಪತ್ರೆಯೊಳಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಕಿರುಕುಳಕ್ಕೊಳಗಾದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದ ಹುಬ್ಬಳ್ಳಿಯ ಚಿಟಗುಪ್ಪಿ ಹಾಗೂ ಉಪನಗರ ಪೊಲೀಸ ಠಾಣೆಯಲ್ಲಿ ಮಧ್ಯರಾತ್ರಿಯವರೆಗೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.