– ಮಳೆಯಿಂದ ಧಾರವಾಡದ ರೈತರ ಮೊಗದಲ್ಲಿ ಸಂತಸ
– ರಾಜ್ಯಾದ್ಯಂತ ಮಳೆಯಾಗೋ ಸಾಧ್ಯತೆ
ಬೆಳಗಾವಿ: ಕೆಲವು ದಿನಗಳಿಂದ ಅನೇಕ ಕಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಇದೀಗ ಕುಂದಾನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ಬೆಳಗಾವಿಯ ಶಾಹುನಗರ ಸೇರಿದಂತೆ ತಗ್ಗುಪ್ರದೇಶದಲ್ಲಿ ಕೆಲ ಮನೆಗಳಲ್ಲಿ ನೀರು ನುಗ್ಗಿದೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಇರುತ್ತೆ. ಈ ನಗರದಲ್ಲಿ ಒಳಚರಂಡಿ ವ್ಯವಸ್ಥೆಯೂ ಸರಿ ಇಲ್ಲ ಎಂದು ಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇನ್ನೂ ಧಾರವಾಡ ಗ್ರಾಮೀಣ ಭಾಗದಲ್ಲೂ ಧಾರಾಕಾರ ಮಳೆಯಾಗಿದ್ದು, ರೈತ ಮೊಗದಲ್ಲಿ ಮಂದಹಾಸ ಮೂಡಿದೆ. ಧಾರವಾಡದ ಉಪ್ಪಿನ ಬೇಟಗೆರಿ, ಹಾರೋ ಬೆಳವಡಿ ಸೇರಿ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ. ಈಗಾಗಲೇ ರೈತರು ಬಿತ್ತನೆಗೆ ಹೊಲ-ಗದ್ದೆ ಸಜ್ಜು ಮಾಡಿಕೊಂಡಿದ್ದರು. ಹೀಗಾಗಿ ಮಳೆಯಿಂದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
Advertisement
ಇಂದು ಸಹ ರಾಜ್ಯಾದ್ಯಂತ ಗುಡುಗು ಮಿಂಚು ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಹಾಗೂ ಕೆಲವು ಉತ್ತರ ಒಳನಾಡಿನ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಅಲ್ಲದೇ ಬೆಂಗಳೂರಿನಲ್ಲಿ ಕೂಡ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.
Advertisement
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಜೂನ್ 2ರ ವೇಳೆಗೆ ಕರ್ನಾಟಕದಲ್ಲಿ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಮೀನುಗಾರರು ಸಮದ್ರಕ್ಕೆ ಇಳಿಯಬಾರದು. ಮೀನುಗಾರಿಕೆಗೆ ತೆರಳಿದ ಮೀನುಗಾರು ಇಂದೇ ಮರಳಿ ದಡ ಸೇರಬೇಕು ಎಂದು ಸೂಚಿಸಲಾಗಿದೆ.