ಮೈಸೂರಿನಲ್ಲಿ ತಲೆ ತಲಾಂತರದಿಂದ ಉಳಿದುಕೊಂಡು ಬಂದಿರುವ ಆರ್ಕೆಸ್ಟ್ರಾ ಬಗ್ಗೆ ಸಿನಿಮಾವೊಂದು ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರದ ಹೆಸರೇ ‘ಆರ್ಕೆಸ್ಟ್ರಾ ಮೈಸೂರು’. ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವುದರ ಜೊತೆಗೆ ಆರ್ಕೆಸ್ಟ್ರಾ ಬಗ್ಗೆ ಹೆಣೆಯಲಾದ ಈ ಚಿತ್ರದ ಮೊದಲ ಪ್ರಮೋಷನಲ್ ಹಾಡು ಬಿಡುಗಡೆಯಾಗಿದೆ. ಮಾದಪ್ಪ ಹೆಸರಿನ ಈ ಹಾಡು ಪ್ರಕೃತಿ ಸೌಂದರ್ಯ ಹಾಗೂ ಜನಪದ ಸೊಗಡಿನಿಂದ ತುಂಬಿದೆ. ಈ ಹಾಡಿಗೆ ನಟ ಡಾಲಿ ಧನಂಜಯ್ ಸಾಹಿತ್ಯ ರಚಿಸಿದ್ದಾರೆ.
Advertisement
‘ಆರ್ಕೆಸ್ಟ್ರಾ ಮೈಸೂರು’ ಚಿತ್ರವನ್ನು ಸುನೀಲ್ ಮೈಸೂರು ನಿರ್ದೇಶನ ಮಾಡಿದ್ದು, ಪೂರ್ಣಚಂದ್ರ, ರಾಜಲಕ್ಷ್ಮಿ ನಾಯಕ ಹಾಗೂ ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಬಾರಿಸು ಕನ್ನಡ ಡಿಂಡಿಮವ ಹಾಡನ್ನು ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದ ಸುನೀಲ್ ಮೈಸೂರು ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ಮುಖಾಂತರ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು ಎಂಟು ಹಾಡುಗಳಿಗೂ ನಟ ಡಾಲಿ ಧನಂಜಯ್ ಸಾಹಿತ್ಯ ಬರೆದಿದ್ದಾರೆ.
Advertisement
Advertisement
ಬಿಡುಗಡೆಯಾಗಿರುವ ಮಾದಪ್ಪ ಹಾಡಿನಲ್ಲಿ ಧನಂಜಯ್ ಕೂಡ ನಟಿಸಿದ್ದಾರೆ. ರಘು ದೀಕ್ಷಿತ್, ನವೀನ್ ಸಜ್ಜು ಹಾಡಿಗೆ ದನಿಯಾಗುವುದಲ್ಲದೇ ಹಾಡಿನಲ್ಲಿ ಹೆಜ್ಜೆ ಹಾಕಿ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡು ನೋಡಲು ಕೂಡ ಅಷ್ಟೇ ಸೊಗಸಾಗಿದೆ. ಶ್ರೀರಂಗಪಟ್ಟಣದ ಬಳ್ಳೆಕೆರೆ ಗ್ರಾಮದಲ್ಲಿ ಮೂರು ದಿನಗಳ ಕಾಲ ಮಾದಪ್ಪ ಹಾಡನ್ನು ಸೆರೆ ಹಿಡಿಯಲಾಗಿದೆ. ಜನಪದ ಪರಂಪರೆ ಬಿಂಬಿಸುವ ಚಿತ್ರೀಕರಣ ಹಾಗೂ ಸಾಹಿತ್ಯವಿರುವ ಈ ಹಾಡು ಬಿಡುಗಡೆಯಾಗಿ ಎಲ್ಲರ ಮನಗೆದ್ದಿದೆ.
Advertisement
ಈಗಾಗಲೇ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ ಚಿತ್ರತಂಡ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜನೆ, ರಾಹುಲ್ ರಾಯ್ ಚೆಂದದ ಛಾಯಾಗ್ರಹಣ ಇದೆ. ಅಶ್ವಿನಿ ಕ್ರಿಯೇಷನ್ಸ್ ಹಾಗೂ ರಘು ದೀಕ್ಷಿತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ಮೂಡಿಬಂದಿದೆ.