ದಂಡನಾಯಕ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹಿರಿಯ ನಿರ್ದೇಶಕ ಎ. ವೈಧ್ಯನಾಥ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರೋ ತ್ರಿವಳಿ ತಲಾಕ್ ವಿಷಯವನ್ನಾಧರಿಸಿ ಚಿತ್ರಕಥೆ ಹೆಣೆದು ತೆರೆ ಮೇಲೆ ತರಲು ರೆಡಿಯಾಗಿದ್ದಾರೆ. ಸಾಮಾಜಿಕ ಕಳಕಳಿ ಒಳಗೊಂಡಿರುವ ಈ ಚಿತ್ರದ ಹೆಸರು `ತಲಾಕ್, ತಲಾಕ್, ತಲಾಕ್’.
Advertisement
ತಲಾಕ್ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕಿ ನೂರ್ ಜಹೀರ್ ಅವರ ಪುಸ್ತಕವನ್ನಾಧರಿಸಿ ಎ. ವೈಧ್ಯನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎ. ವೈಧ್ಯನಾಥ್ ಇಬ್ಬರ ಮಕ್ಕಳು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಲಾಕ್ ನಂತರ ಹೆಣ್ಣು ಮಕ್ಕಳು ಅನುಭವಿಸುವ ನೋವಿನ ಬಗ್ಗೆ ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ನಿರ್ದೇಶಕರು ಯಾರ ಭಾವನೆಗಳಿಗೂ ನೋವಾಗದಂತೆ ಎಚ್ಚರ ವಹಿಸಿ ಸಿನಿಮಾ ಮಾಡಿದ್ದಾರೆ. ಈಗಾಗಲೇ ಯು.ಕೆ, ಆಸ್ಟ್ರೇಲಿಯಾ, ಚೆನ್ನೈ ಫಿಲ್ಮೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ ‘ತಲಾಕ್, ತಲಾಕ್, ತಲಾಕ್’ ಚಿತ್ರ. ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಸದ್ಯದಲ್ಲೇ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.
Advertisement
Advertisement
ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಕ್ಯಾಮೆರಾ ಕಣ್ಣಲ್ಲಿ ‘ತಲಾಕ್, ತಲಾಕ್, ತಲಾಕ್’ ಸಿನಿಮಾ ಸೆರೆಯಾಗಿದ್ದು, ಪ್ರವೀಣ್ ಗೋಡ್ಕಿಂಡಿ ಅವರ ಮನ ಮಿಡಿಯುವ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹಿರಿಯ ನಟ ಶ್ರೀನಿವಾಸ ಮೂರ್ತಿ ಚಿತ್ರದಲ್ಲಿ ಮೌಲ್ವಿ ಪಾತ್ರದಲ್ಲಿ ನಟಿಸಿದ್ದು, ಆರ್.ಜೆ. ನೇತ್ರಾ, ರವಿ ಭಟ್, ವೀಣಾ ಸುಂದರ್, ಪದ್ಮಾ ಜೋಯಿಸ್, ಶಾಮಂತ್ ವೈಧ್ಯ, ಸುಚೇತನ್ ಸ್ವರೂಪ್ ವೈಧ್ಯನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎ.ವೈಧ್ಯನಾಥ್ ಸಿನಿಮಾ ನಿರ್ದೇಶನದ ಜೊತೆ ನಿರ್ಮಾಣವನ್ನು ಮಾಡಿದ್ದು, ಪತ್ನಿ ಸುಭಾಷಿಣಿ ವೈಧ್ಯನಾಥ್ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸಾಕಷ್ಟು ಗಮನ ಸೆಳೆದಿರುವ ಈ ಚಿತ್ರ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕು.
Advertisement