– ಡ್ರಗ್ಸ್ ವ್ಯವಸ್ಥೆಯಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಭಾಗಿ
ಶಿವಮೊಗ್ಗ: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಚಿತ್ರ ನಟಿಯರು ಹಾಗೂ ಅವರಿಗೆ ಡ್ರಗ್ಸ್ ಪೂರೈಸಿದವರು ಈಗಾಗಲೇ ಜೈಲಿನಲ್ಲಿದ್ದು, ಈ ಪ್ರಕರಣದಲ್ಲಿ ಇನ್ನೂ ಅನೇಕ ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಯಾರೇ ಪ್ರಭಾವಿಗಳು ಇದ್ದರೂ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮವೇ ನಮ್ಮ ಸಂಸ್ಕೃತಿಗೆ ನಾಚಿಕೆಗೇಡು ಎಂದರು.
Advertisement
Advertisement
ಅನೇಕ ವರ್ಷಗಳಿಂದ ಡ್ರಗ್ಸ್, ಮಾದಕ ವಸ್ತು ಸೇವನೆ ಹಾಗೂ ಲೈಂಗಿಕ ಚಟುವಟಿಕೆ ನಡೆಯುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ಬೇರೆ ರಾಜ್ಯ ಹಾಗೂ ವಿದೇಶದಿಂದ ಡ್ರಗ್ಸ್ ಸರಬರಾಜು ಆಗುತ್ತಿದೆ. ಡ್ರಗ್ಸ್ ವಿರುದ್ಧ ಬಿಜೆಪಿ ಸರ್ಕಾರ ಒಂದು ದಿಟ್ಟ ನಿಲುವು ಕೈಗೊಂಡಿದ್ದು, ರಾಜ್ಯದಲ್ಲಿ ಇನ್ನು ಮುಂದೆ ಡ್ರಗ್ಸ್ ಇರಬಾರದು ಎಂಬ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
Advertisement
Advertisement
ಡ್ರಗ್ಸ್ ವ್ಯವಸ್ಥೆ ಬಗ್ಗೆ ವಿಧಾನ ಮಂಡಲದ ಒಳಗೆ ಹಾಗೂ ಹೊರಗೆ ಸಾಕಷ್ಟು ಚರ್ಚೆ ಆಯಿತು. ಆದರೆ ಈ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಡ್ರಗ್ಸ್ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಬೆಂಬಲ ಕೊಡಲಿಲ್ಲ ಎಂಬುದು ತುಂಬ ನೋವಿನ ಸಂಗತಿ. ಡ್ರಗ್ಸ್ ವಿಚಾರದಲ್ಲಿ ಪೊಲೀಸರು ಒಳ್ಳೆಯ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಸಹ ಪೊಲೀಸರ ಬೆಂಬಲಕ್ಕೆ ಇದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿಯೇ ತೀರುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.