ಧಾರವಾಡ: ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲ ನಮ್ಮ ಪಕ್ಷವನ್ನೇ ಬೈಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶೇ. 60ಕ್ಕೂ ಹೆಚ್ಚು ಜನ ಜೆಡಿಎಸ್ ಮೂಲದವರೇ ಸಚಿವರಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರಡ್ಡಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿಯೂ ನಮ್ಮವರೇ ಇದ್ದಾರೆ. ಜೆಡಿಎಸ್ ಒಂದು ರೀತಿ ಪ್ರೊಡಕ್ಷನ್ ಫ್ಯಾಕ್ಟರಿ ಆಗಿದೆ. ಎಲ್ಲ ಪಕ್ಷಗಳಲ್ಲೂ ನಮ್ಮ ಪಕ್ಷದಿಂದ ಹೋದವರೇ ಹೆಚ್ಚಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಬಗ್ಗೆ ಎಚ್.ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ವಿಶ್ವನಾಥ್ ಅವರಿಂದ ಕಲಿಯಬೇಕಾಗಿಲ್ಲ. ವಿಶ್ವನಾಥ್ ಈಗ ದೊಡ್ಡ ರಾಷ್ಟ್ರೀಯ ಪಕ್ಷ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಮಾತನಾಡಬಾರದು. ಜೆಡಿಎಸ್ ಅಧಿಕಾರಕ್ಕಾಗಿ ಯಾರ ಜೊತೆಯೋ ಹೋಗುತ್ತಿದೆ ಎಂದು ವಿಶ್ವನಾಥ ಹೇಳಿದ್ದಾರೆ. ಹಾಗಾದರೆ ಅವರು ಯಾವ ವಿಚಾರಕ್ಕೆ ಬಿಜೆಪಿ ಸೇರಿದರು? 17 ಜನ ಎಲ್ಲರೂ ಸ್ವಾರ್ಥ ಇಲ್ಲದೆಯೇ ಬಿಜೆಪಿಗೆ ಹೋದರಾ ಎಂದು ಪ್ರಶ್ನಿಸಿದರು.
ಪಾಪ ವಿಶ್ವನಾಥ್ ಅವರು ಈಗ ಮಂತ್ರಿಯೂ ಆಗದಂತೆ ಆಗಿದೆ, ಇದರ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೆಡಿಎಸ್ ಬಗ್ಗೆ ದಯವಿಟ್ಟು ಅವರು ಮಾತನಾಡಬಾರದು. ಬಿಟ್ಟು ಹೋದ ಪಕ್ಷದ ಬಗ್ಗೆ ಮಾತನಾಡಬೇಡಿ, ವಿಶ್ವನಾಥ್ ಅಧಿಕಾರಕ್ಕಾಗಿ ಆ ಪಕ್ಷಕ್ಕೆ ಬಗ್ಗಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಮಹದಾಯಿ ಈಗ ಮುಗಿದು ಹೋದ ಅಧ್ಯಾಯ, ಮಹದಾಯಿ ಕಾಮಗಾರಿ ಆರಂಭಿಸಬೇಕಿದೆ. ಸಿಎಂ ಮತ್ತು ಸಚಿವ ರಮೇಶ ಜಾರಕಿಹೊಳಿ ಸುಮ್ಮನೆ ಕುಳಿತಿದ್ದಾರೆ, ಇವರು ಸುಮ್ಮನೆ ಕುಳಿತಿದ್ದಕ್ಕೆ ಗೋವಾದವರು ಎದ್ದು ಕುಳಿತಿದ್ದಾರೆ ಎಂದು ಕೊನರಡ್ಡಿ ಹೇಳಿದರು.