– ಕೇಂದ್ರ ಮಂತ್ರಿ ಹೇಳಿಕೆಗೆ ರಾವತ್ ತಿರುಗೇಟು
ಮುಂಬೈ: ಕೇಂದ್ರ ಮಂತ್ರಿ ರಾವ್‍ಸಾಹೇಬ್ ದಾಳ್ವೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ನೆರೆಯ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಬುದ್ಧಿ ಕಲಿಸಬೇಕಿದೆ ಎಂದು ಹೇಳಿದ್ದಾರೆ.
ನವೆಂಬರ್ 26ರಿಂದ ದೆಹಲಿಯ ಗಡಿ ಭಾಗದಲ್ಲಿ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಈ ಸಮಸ್ಯೆಯಿಂದ ಹೊರ ಬರಬೇಕಾದ್ರೆ ಹೊಸ ಕೃಷಿ ಕಾಯ್ದೆಗಳನ್ನ ಹಿಂಪಡೆದುಕೊಳ್ಳಬೇಕು. ಇಡೀ ದೇಶದ ರೈತ ವರ್ಗ ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ ಬಿಜೆಪಿ ಸಚಿವರು, ನಾಯಕರು ರೈತರ ಪ್ರತಿಭಟನೆ ಹಿಂದೆ ಪಾಕಿಸ್ತಾನ ಮತ್ತು ಚೀನಾದ ಬೆಂಬಲವಿದೆ ಎಂದು ಹೇಳುವ ಮೂಲಕ ಅನ್ನದಾತರನ್ನ ಅವಮಾನಿಸುತ್ತಿದ್ದಾರೆ ಎಂದು ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿಗೆ ಬಿಜೆಪಿಗೆ ಒಪ್ಪಿದ್ರೆ ಮೊದಲಿಗೆ ತನ್ನ ಆಡಳಿತ ಇರೋ ರಾಜ್ಯಗಳಲ್ಲಿ ಕಾನೂನುಗಳನ್ನ ಜಾರಿಗೆ ತರಲಿ. ತದನಂತರ ಅಲ್ಲಿಯ ಸಾಧಕ-ಬಾಧಕಗಳನ್ನ ಗಮನದಲ್ಲಿರಿಸಿ ಉಳಿದ ಬಿಜೆಪಿಯೇತರ ಸರ್ಕಾರಗಳು ಕಾಯ್ದೆಗಳನ್ನು ತರಲಿವೆ ಎಂದು ಹೇಳಿದರು.
ಕೇಂದ್ರ ಮಂತ್ರಿ ರಾವ್‍ಸಾಹೇಬ್ ದಾಳ್ವೆ ಹೇಳಿದ್ದೇನು?: ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವರು, ರೈತರ ಆಂದೋಲನದ ಹಿಂದೆ ವೈರಿ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದ್ದರು.