ಹುಬ್ಬಳ್ಳಿ: ಕಲಘಟಗಿ ಬಿಜೆಪಿ ಶಾಸಕ ಸಿಎಂ ನಿಂಬಣ್ಣನವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಸುಚಿರಾಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಮೈಕೈ ನೋವು, ಚಳಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ನಿಂಬಣ್ಣನವರ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಪರೀಕ್ಷೆ ನಂತರ ಶಾಸಕರಿಗೆ ಕೊರೊನಾ ಇರೋದು ದೃಢಪಟ್ಟಿದೆ. ಕೊರೊನಾ ದೃಢಪಟ್ಟಿರುವುದನ್ನು ಅಧಿಕೃತವಾಗಿ ಹೇಳಿಕೊಂಡಿರುವ ಶಾಸಕರು, ಮತಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದ್ದು ಶ್ರೀಘ್ರದಲ್ಲೆ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಶಾಸಕರ ಪೈಕಿ ಈ ಹಿಂದೆ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯರಿಗೂ ಸೋಂಕು ದೃಢಪಟ್ಟು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಬಿಜೆಪಿ ಶಾಸಕ ನಿಂಬಣ್ಣನವರ ಅವರಿಗೂ ಸೋಂಕು ಕಾಣಿಸಿಕೊಂಡ ಪರಿಣಾಮ ಜಿಲ್ಲೆಯಲ್ಲಿ ಇಬ್ಬರು ಶಾಸಕರಿಗೆ ಕೊರೊನಾ ಬಂದತಾಗಿದೆ.