ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಕಡಲ ನಗರಿ ಮಂಗಳೂರಿನಲ್ಲಿ ಅದ್ಧೂರಿ ತಯಾರಿ

Public TV
2 Min Read
mng bjp

ಮಂಗಳೂರು: ಬಿಜೆಪಿಯ ಶಕ್ತಿ ಕೇಂದ್ರ ಕಡಲನಗರಿ ಮಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಾಳೆ ನಡೆಯಲಿದೆ. ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಹಲವಾರು ಮಹತ್ವದ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಿಎಂ ಯಡಿಯೂರಪ್ಪ ಆದಿಯಾಗಿ ಸಚಿವರು, ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕಾರಣಿಗೆ ಮಂಗಳೂರು ಅದ್ಧೂರಿಯಾಗಿ ಶೃಂಗಾರಗೊಂಡಿದೆ.

mng nalin kumar 1

ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಮೊದಲ ಬಾರಿಗೆ 20 ವರ್ಷಗಳ ಬಳಿಕ ತಮ್ಮ ತವರು ಜಿಲ್ಲೆಯಲ್ಲಿ ಕೋರ್ ಕಮಿಟಿ ಸಭೆ ನಡೆಸುತ್ತಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಸಭೆ ಇದೀಗ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಕೋರ್ ಕಮಿಟಿ ಸಭೆಯ ಜೊತೆಗೆ ರಾಜ್ಯ ಕಾರ್ಯಕಾರಿಣಿ ಸಭೆಯು ನಡೆಯುತ್ತಿದೆ. ನಗರದ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಈ ಸಭೆ ನಡೆದರೆ, ಕೋರ್ ಕಮಿಟಿ ಸಭೆ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ನಡೆಯಲಿದೆ.

mng bjp 3

ವ್ಯವಸ್ಥಿತವಾಗಿ ಸಭೆ ನಡೆಸಲು ಜಿಲ್ಲಾ ಬಿಜೆಪಿ ಈಗಾಗಲೇ ಅಂತಿಮ ಹಂತದ ಸಿದ್ಧತೆ ನಡೆಸಿದೆ. ನಗರ ಪೂರ್ತಿ ಬ್ಯಾನರ್ ಬಂಟಿಗ್ಸ್ ನಿಂದ ಅಲಂಕರಿಸಲಾಗಿದೆ. ಎಲ್ಲೆಡೆ ಕಮಲದ ಫ್ಲ್ಯಾಗ್ ಗಳು ರಾರಾಜಿಸುತ್ತಿದೆ. ಕಾರ್ಯಕಾರಣಿ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ,ಡಿ.ವಿ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂತಾದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಗುರುವಾರ ಸಂಜೆ 5ರವರೆಗೆ ನಡೆಯುವ ಸಭೆಯಲ್ಲಿ ಪಕ್ಷ ಸಂಘಟನೆ, ಮುಂದಿನ ಕಾರ್ಯಯೋಜನೆ, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 120 ಮಂದಿ ಭಾಗವಹಿಸಲಿದ್ದಾರೆ. ಕೇಂದ್ರದ ಯೋಜನೆಗಳು ಮತ್ತು ವರಿಷ್ಠರ ಸಲಹೆ, ಸೂಚನೆಗಳ ಬಗ್ಗೆ ಚರ್ಚೆಯಾಗಲಿದೆ.

mng nalin kumar 2

ಕಾರ್ಯಕಾರಿಣಿ ಸಭೆಯ ಸಲಹೆ, ಸೂಚನೆಗಳು ಆಯಾ ಜಿಲ್ಲೆ, ಮಂಡಲಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಸಮಾರೋಪದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳು ಪ್ರತಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಈ ನಿರ್ಧಾರ ಮಾಡಿದೆ. ಈ ಮೂಲಕ ಜಿಲ್ಲೆಯ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಬಿಜೆಪಿಯ ಪ್ಲ್ಯಾನ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *