ಚಿತ್ರದುರ್ಗ: ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆ ಪೂರ್ವದಲ್ಲಿ ಜನರಿಗೆ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿದ್ದರು. ಇದೀಗ ನರಕ ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಧಿಕಾರ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ರಾಜ್ಯ ಸರ್ಕಾರ ತುಘಲಕ್ ಆಡಳಿತ ನಡೆಸುತ್ತಿದೆ. ಹೀಗಂತ ಬಿಜೆಪಿ ಮುಖಂಡರೇ ಮುಖ್ಯಮಂತ್ರಿಗಳ ಮೇಲೆ ಆರೋಪಿಸುತ್ತಿದ್ದಾರೆ. ಇದು ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
Advertisement
Advertisement
ಕೊರೊನಾದಿಂದ ಸುಮಾರು 3 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದರೆ ರಾಜ್ಯ ಸರ್ಕಾರ 30 ಸಾವಿರ ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವರದಿ ನೀಡುತ್ತಿದೆ. ಅಲ್ಲದೆ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಮೃತಪಟ್ಟಿದ್ದು, ಈ ಮರಣವನ್ನು ರಾಜ್ಯ ಸರ್ಕಾರ ನೆಡೆಸಿದ ಕೊಲೆ ಎಂದು ನಾವು ಪರಿಗಣಿಸುತ್ತೇವೆ ಎಂದರು.
Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು. ಬೆಲೆ ಏರಿಕೆ ಖಂಡಿಸಿ ಜು.7ರಂದು ರಾಜ್ಯದ್ಯಂತ ಸೈಕಲ್ ಜಾಥಾ ನಡೆಸಲಿದ್ದೇವೆ. ಪಾರ್ಲಿಮೆಂಟ್ ನಿಂದ ಗ್ರಾಮ ಪಂಚಾಯಿತಿವರಿಗೆ ಸಹಾಯ ಹಸ್ತ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿದೆ. ಕೋವಿಡ್ ಬಾಧಿತ ಕುಟುಂಬಗಳನ್ನು ಭೇಟಿ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಜನರ ಕೊರೊನಾ ವಾರಿಯರ್ಸ್ ನೇಮಕ ಮಾಡುತ್ತೇವೆ ಎಂದು ಹೇಳಿದರು.
Advertisement
ಅಧಿಕಾರ ಮತ್ತು ಹಣಕ್ಕಾಗಿ ನಮ್ಮ ಪಕ್ಷದ ಕೆಲವು ಶಾಸಕರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಆದರೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಸದ್ಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ನಾವು ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡಲಿದ್ದೇವೆ ಎಂದರು. ಈ ವೇಳೆ ಶಾಸಕ ರಘುಮೂರ್ತಿ, ಮಾಜಿ ಸಚಿವ ಆಂಜನೇಯ, ಮಾಜಿ ಶಾಸಕರಾದ ಎಸ್.ತಿಪ್ಪೇಸ್ವಾಮಿ, ಉಮಾಪತಿ, ಬಿಜಿ ಗೋವಿಂದಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ ಹಾಜರಿದ್ದರು.