– ‘ಪರ್ಸಂಟೇಜ್ ಫಿಕ್ಸ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ’: ಶಾಸಕ ನಂಜೇಗೌಡ
ಕೋಲಾರ: ಬಿಜೆಪಿಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಪರ್ಸಂಟೇಜ್ ಫಿಕ್ಸ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಗಾಳಿಗೆ ಬಂದಿರುವ ಜನಪ್ರತಿನಿಧಿಗಳು ಕೋಲಾರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಅವರ ಹೆಸರು ಪ್ರಸ್ತಾಪ ಮಾಡದೆ ಪರೋಕ್ಷವಾಗಿ ಶಾಸಕ ನಂಜೇಗೌಡ ಟಾಂಗ್ ನೀಡಿದರು. ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಧಿಕಾರಿಗಳ ಬಳಿ ಬಿಜೆಪಿಯ ಜನಪ್ರತಿನಿದಿಗಳು ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅನಿವಾರ್ಯವಾಗಿ ಅಧಿಕಾರಿಗಳು ಈ ಗಾಳಿಗೆ ಬಂದ ಜನಪ್ರತಿನಿಧಿಗಳಿಗೆ ಶರಣಾಗಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
Advertisement
Advertisement
ಅಧಿಕಾರ ಶಾಶ್ವತವಲ್ಲ, ಅಧಿಕಾರ ಸಿಕ್ಕಾಗ ಯಾರೇ ಆಗಲಿ ಪಕ್ಷಾತೀತವಾಗಿ ಬೇಧಬಾವ ಇಲ್ಲದೆ ಜಿಲ್ಲೆಯ ಜನ ಮೆಚ್ಚುವಂತಹ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ ನಾಯಕರು ವೈಯಕ್ತಿಕ ವಿಚಾರಗಳನ್ನು ತಗೊಂಡು ರಾಜಕೀಯ ಮಾಡಬಾರದು. ನಾವು ಗೆದ್ದಿದ್ದೀವಿ ಶಾಶ್ವತವಾಗಿ ನಾವೇ ಇರುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಗಾಳಿಯಲ್ಲಿ ಅಧಿಕಾರ ಬಂದಿದೆ, ಅದನ್ನು ಗಾಳಿಯಲ್ಲೇ ಕಳೆದುಕೊಳ್ಳಬಾರದು ಎಂದು ನಾನು ಅವರಿಗೆ ಸಲಹೆ ಕೊಡುತ್ತೆನೆ ಎಂದರು.
Advertisement
ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಾಗಿದ್ದೇವೆ. ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರೆ ಉತ್ತಮ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬೀದಿಗಿಳಿದು ಹೋರಾಟ ಮಾಡುತ್ತಿವಿ ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಬಿಜೆಪಿ ನಾಯಕರಿಗೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಖಡಕ್ ಆಗಿ ಎಚ್ಚರಿಕೆ ನೀಡಿದರು.