ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

Public TV
3 Min Read
DK Shivakumar Congress Price Hike Petro Protest 7

ಬೆಂಗಳೂರು:ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಸ್ಪತೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನ ಕ್ಯೂ ನಿಲ್ಲುವಂತೆ ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

DK Shivakumar Congress Price Hike Petro Protest 8 medium

ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿಯೊಂದು ವಿಚಾರಕ್ಕೂ ನಿಮ್ಮನ್ನೆಲ್ಲ ಕ್ಯೂ ನಿಲ್ಲಿಸಿದರಲ್ಲಾ ಅಂತಾ ಸಂಕಟವಾಗುತ್ತಿದೆ. ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು.

DK Shivakumar Congress Price Hike Petro Protest 1 medium

ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರ್ಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು. ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ

DK Shivakumar Congress Price Hike Petro Protest 6 medium

ಚುನಾವಣೆ ಕಾರಣಕ್ಕೆ ನಾವು ಇಲ್ಲಿಗೆ ಬಂದು ಈ ಕಾರ್ಯಕ್ರಮ ಮಾಡುತ್ತಿಲ್ಲ. ದೇಶದೆಲ್ಲೆಡೆ ಜನ ಸಂಕಟದಲ್ಲಿದ್ದು, ಅವರಿಗೆ ಸಹಾಯ ಮಾಡಲು ನಾವು ಈ ಇಲ್ಲಿಗೆ ಬಂದಿದ್ದೇವೆ. ನಾವು ಮಾಡುವ ಸಹಾಯದಿಂದ ನಿಮ್ಮ ಜೀವನ ಉದ್ಧಾರವಾಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ಕಷ್ಟದಲ್ಲಿರುವ ಜನರ ಭಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ.

DK Shivakumar Congress Price Hike Petro Protest 5 medium

ಬಡವರು, ಮಧ್ಯಮ ವರ್ಗದವರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಚಿನ್ನ ಅಡವಿಟ್ಟು ಜೀವನ ಮಾಡಲು ಮುಂದಾಗಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಕೊಡುತ್ತೇವೆ ಎಂದವರು ವಿದ್ಯಾವಂತರಿಗೆ ಪಕೋಡಾ ಮಾರಲು ಹೇಳಿದರು. ಪಕೋಡಾ ಮಾಡುವ ಅಡುಗೆ ಎಣ್ಣೆ ಬೆಲೆಯನ್ನು ರೂ.200ಕ್ಕೆ ಹೆಚ್ಚಿಸಿದ್ದಾರೆ. ಇಡೀ ದೇಶದ ಜನರನ್ನು ಬಡತನಕ್ಕೆ ನೂಕಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಮೂಲಬೆಲೆ 35 ರೂ., ಅದಕ್ಕೆ ತೆರಿಗೆ 65 ರೂ. ನೆರೆ ರಾಷ್ಟ್ರಗಳಲ್ಲಿ ಅರ್ಧದಷ್ಟಿದ್ದರೂ ನಮ್ಮಲ್ಲಿ ಮಾತ್ರ ಬೆಲೆ ಹೆಚ್ಚುತ್ತಲೇ ಇದೆ. ಈ ಸರ್ಕಾರ ದಿನಾ ಜನರ ಜೇಬು ಪಿಕ್ ಪಾಕೆಟ್ ಮಾಡುತ್ತಿದೆ. ಇದನ್ನೂ ಓದಿ: ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ

DK Shivakumar Congress Price Hike Petro Protest 4 medium

ಆರ್ಥಿಕ ನೆರವು:
ನಮ್ಮ ನಾಯಕರು ತಮ್ಮ ಸ್ವಂತ ಹಣದಲ್ಲಿ ನಿಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಮ್ಮ ನಾಯಕರೆಲ್ಲರೂ ಹಣ ಸೇರಿಸಿ ಈ ಕ್ಷೇತ್ರದ ಬಡ ಕುಟುಂಬಗಳಿಗೆ ತಲಾ 1 ಸಾವಿರ ರೂ. ನೀಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು ನಾನಿಲ್ಲಿಗೆ ಬಂದಿದ್ದೇನೆ. ಈ ಹಣ ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸದೆ ಇರಬಹುದು. ಆದರೆ ಕಷ್ಟಕಾಲದಲ್ಲಿ ನಿಮ್ಮ ಜತೆ ನಿಲ್ಲಲು ನಮ್ಮ ನಾಯಕರು ಮುಂದೆ ಬಂದಿದ್ದಾರೆ. ಅನೇಕರಿಗೆ ಊಟಕ್ಕೆ, ಔಷಧಿಗೆ ಹಣವಿರುವುದಿಲ್ಲ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಈ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ನಿಮ್ಮ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ.

DK Shivakumar Congress Price Hike Petro Protest 3 medium

ಕಳೆದ ಬಾರಿ ಹಾಲು ಕೇಳಿದವರಿಗೆ ಐಪಿಸಿ ಸೆಕ್ಷನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ಪೊಲೀಸರನ್ನು ಬಳಸಿಕೊಂಡು ಮೂರ್ನಾಲ್ಕು ಕೇಸ್ ಹಾಕಿಸಿದ್ದಾರೆ ಎಂದು ಒಬ್ಬರು ಹೆಣ್ಣು ಮಗಳು ಹೇಳುತ್ತಿದ್ದರು. ಆ ರೀತಿ ನಿಮಗೆ ಯಾರಾದರೂ ಯಾವುದೇ ತೊಂದರೆ ಕೊಟ್ಟರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ರಕ್ಷಣೆಗೆ ಕಾಂಗ್ರೆಸ್ ಸದಾ ನಿಲ್ಲಲಿದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಷನ್ ಚುನಾವಣೆ ಬರುತ್ತಿದೆ, ವಿಧಾನಸಭೆ ಚುನಾವಣೆಯೂ ಬರಲಿದೆ. ನೀವು ಬಿಜೆಪಿಯವರಿಗೆ ಬುದ್ದಿ ಕಲಿಸಬೇಕು. ನಾವು ನಿಮ್ಮ ಜತೆ ಇರುತ್ತೇವೆ.

Share This Article
Leave a Comment

Leave a Reply

Your email address will not be published. Required fields are marked *