ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿರುವ ಭಾರತೀಯ ಜನತಾ ಪಾರ್ಟಿ ತನ್ನ ಮೂವರು ರಾಜ್ಯಾಧ್ಯಕ್ಷರನ್ನು ಬದಲು ಮಾಡಿದೆ. ದೆಹಲಿ, ಮಣಿಪುರ ಹಾಗೂ ಛತ್ತೀಸ್‍ಗಢ ರಾಜ್ಯಾಧ್ಯಕ್ಷರನ್ನು ಬದಲಾಯಿಸಲಾಗಿದೆ.
ದೆಹಲಿ ಘಟಕದ ಅಧ್ಯಕ್ಷ ಸ್ಥಾನದಿಂದ ಮನೋಜ್ ತಿವಾರಿ ಅವರನ್ನು ತೆರವುಗೊಳಿಸಿ ನೂತನ ಅಧ್ಯಕ್ಷರಾಗಿ ಆದೇಶ್ ಕುಮಾರ್ ಗುಪ್ತಾ ಅವರನ್ನು ನೇಮಿಸಲಾಗಿದೆ. ಆದೇಶ್ ಕುಮಾರ್ ಗುಪ್ತಾ ಉತ್ತರ ದೆಹಲಿ ಪುರಸಭೆಯ ಮಾಜಿ ಮೇಯರ್ ಆಗಿದ್ದಾರೆ. ಮನೋಜ್ ತಿವಾರಿ ಅವರು 2016ರಲ್ಲಿ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ಬಳಿಕ ತಿವಾರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲು ಸೂಕ್ತ ಸಮಯ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗಿತ್ತು.
ಕೆಲವು ಮೂಲಗಳ ಪ್ರಕಾರ, ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ತಿವಾರಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪಕ್ಷದ ಮುಂದೆ ಬೇರೆ ಆಯ್ಕೆಗಳಿಲ್ಲದಿರುವುದರಿಂದ ಅವರನ್ನು ಸ್ಥಾನದಲ್ಲಿ ಮುಂದುವರಿಸಲಾಗಿತ್ತು. ಇತ್ತೀಚೆಗೆ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹರಿಯಾಣದ ಕ್ರಿಕೆಟ್ ಅಕಾಡೆಮಿಯಲ್ಲಿ ಆಟವಾಡಿದ್ದು, ವಿವಾದಕ್ಕೆ ಗ್ರಾಸವಾದ ಬಳಿಕ ಅವರನ್ನು ಬದಲಾಯಿಸಲಾಗಿದೆ.
ಇನ್ನು ಛತ್ತೀಸ್‍ಗಢ ರಾಜ್ಯಾಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ ವಿಷ್ಣುದೇವ್ ಸಾಯ, ಮಣಿಪುರ ರಾಜ್ಯಾಧ್ಯಕ್ಷರಾಗಿ ಪ್ರೊ.ಎಸ್ ಟಿಕೇಂದ್ರ ಸಿಂಗ್ ಅವರನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ.