ಬಿಜೆಪಿಯಿಂದ ಕನ್ನಡಿಗರಿಗೆ ಮಹಾದ್ರೋಹ: ಎಎಪಿ

Public TV
2 Min Read
AAP

ಬೆಂಗಳೂರು: ಸಿಲಿಕಾನ್ ಸಿಟಿಯ ಅನೇಕ ವಾರ್ಡ್‍ಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಕೊರತೆಯಿದ್ದು, ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಹಾಕಾರ ಸೃಷ್ಟಿಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಡಳಿತಾರೂಢ ಬಿಜೆಪಿ ಬಳಿ ಇದಕ್ಕೆ ಮೇಕೆದಾಟು ಯೋಜನೆಯಲ್ಲದೇ ಬೇರೇನು ಪರಿಹಾರವಿದೆ ಎಂದು ಎಎಪಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಪ್ರಶ್ನಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. 13 ವರ್ಷಗಳ ಹಿಂದೆ ಕೇವಲ 100 ವಾರ್ಡ್‍ಗಳನ್ನು ಹೊಂದಿದ್ದ ಬಿಬಿಎಂಪಿಯು 2007ರಲ್ಲಿ 110 ಹಳ್ಳಿಗಳು ಸೇರಿದ ಬಳಿಕ 198 ವಾರ್ಡ್‍ಗಳನ್ನು ಹೊಂದಿದೆ. ಈಗ 45 ವಾರ್ಡ್‍ಗಳನ್ನು ಸೇರಿಸಿ 243 ವಾರ್ಡ್ ಮಾಡಲು ಸಿದ್ಧತೆ ನಡೆಯುತ್ತಿದೆ. 2007ರಲ್ಲಿ ಸೇರಿದ 110 ವಾರ್ಡ್‍ಗಳಿಗೇ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗದೇ 243 ವಾರ್ಡ್‍ಗಳಿಗೆ ಕುಡಿಯುವ ನೀರು ಪೂರೈಕೆ ಅಸಾಧ್ಯ ಎಂಬ ಅರಿವೂ ಕೂಡ ಬಿಜೆಪಿ ನಾಯಕರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

BJP Flag Final 6

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ಬೆಂಗಳೂರಿನ ಜನತೆಗೆ ಮಾಡುತ್ತಿರುವ ಮಹಾದ್ರೋಹವನ್ನು ಖಂಡಿಸುವ ಬದಲು, ತಮಿಳುನಾಡಿನ ಪರವಾಗಿ ನಿಲುವು ತಳೆಯುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈರವರು ಮೇಕೆದಾಟು ವಿರುದ್ಧ ಟ್ವೀಟ್ ಮಾಡಿದರೆ, ಕರ್ನಾಟಕದ ಸಿ.ಟಿ.ರವಿಯವರು ಅದನ್ನು ರೀಟ್ವೀಟ್ ಮಾಡುವ ಮೂಲಕ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಬಿಟ್ಟು ಸಿ.ಟಿ.ರವಿ ಬದುಕುತ್ತಿರುವುದು ದುರಂತ. ಬಿಜೆಪಿಯ ರಾಜ್ಯಾಧ್ಯಕ್ಷ ಕಟೀಲ್‍ರವರಿಗೆ ಸ್ವಲ್ಪವಾದರೂ ನಾಡಿನ ಬಗ್ಗೆ ಕಾಳಜಿಯಿದ್ದರೆ, ಕ್ಷಮೆ ಯಾಚಿಸುವಂತೆ ಸಿ.ಟಿ.ರವಿಗೆ ನೋಟಿಸ್ ಜಾರಿ ಮಾಡಲಿ. ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಹೊಂದಿರುವ ಸಾವಿರಾರು ಕೋಟಿ ಮೊತ್ತದ ಆಸ್ತಿಗಳಿಗೆ ಕುಡಿಯುವ ನೀರಿನ ಸಂಪರ್ಕ ಬೇಡವೇ ಎಂದು ಮೋಹನ್ ದಾಸರಿ ಪ್ರಶ್ನಿಸಿದರು.

mekedatu 1 1

ಮೇಕೆದಾಟು ಯೋಜನೆಗೆ ಕರ್ನಾಟಕವು ತಮಿಳುನಾಡಿನ ಅನುಮತಿ ಪಡೆಯಬೇಕೆಂದು ಲೋಕಸಭೆಯಲ್ಲಿ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ನೀಡಿರುವ ಹೇಳಿಕೆ ಅಪ್ರಬುದ್ಧವಾಗಿದೆ. ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲವಾದ್ದರಿಂದ ಯಾರ ಅಪ್ಪಣೆಯೂ ರಾಜ್ಯಕ್ಕೆ ಬೇಕಾಗಿಲ್ಲ. ಸುಪ್ರೀಂಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿ ಕೂಡ ತೀರ್ಪಿನಲ್ಲಿ ಇದನ್ನೇ ಹೇಳಿದೆ. ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರೂ ಶೇಖಾವತ್ ಹೇಳಿಕೆಯನ್ನು ಖಂಡಿಸದಿರುವುದು ದುರಂತ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆಡಳಿತ ನೀಡಿದ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದಕ್ಕಾಗಿ ಬಿಜೆಪಿಯು ಎಂದೆಂದಿಗೂ ಕರ್ನಾಟಕಕ್ಕೆ ರುಣಿಯಾಗಿರಬೇಕಿತ್ತು. ಆದರೆ ಉಂಡ ಮನೆಗೆ ದ್ರೋಹ ಬಗೆಯುವುದು ಬಿಜೆಪಿಯ ಸಂಸ್ಕೃತಿ ಎಂಬುದು ಮೇಕೆದಾಟು ವಿಚಾರದಲ್ಲಿ ಸ್ಪಷ್ಟವಾಗಿದೆ. ತಮಿಳುನಾಡಿಗೆ ಒಳಗೊಳಗೆ ಬೆಂಬಲ ನೀಡುತ್ತಿರುವ ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ, ಕೇಂದ್ರ ಸರ್ಕಾರದ ನಡೆ ಬಗ್ಗೆ ತಮ್ಮ ನಿಜವಾದ ನಿಲುವು ಏನೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *