ಚಾಮರಾಜನಗರ: ನಮ್ಮದು ಈಗ ಬಾಂಬೆ ಟೀಂ ಅಲ್ಲ. ಬಿಎಸ್ ವೈ ಟೀಂ, ಬಿಜೆಪಿ ಟೀಂ. ನಮ್ಮಲ್ಲಿ ಯಾವುದೇ ರೀತಿಯ ಬಿರುಕಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಇಂದು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಯ ಅಸಮಾಧಾನ ವಿಚಾರವಾಗಿ, ನಮ್ಮ ಐದು ಬೆರಳುಗಳೇ ಸಮವಿಲ್ಲ. ಅಂತೆಯೇ ಕೆಲವರಿಗೆ ಅತೃಪ್ತಿ ಆಗಿರುವುದು ಸಹಜ. ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರಲಿದ್ದು, ಬಳಿಕ ಶಮನ ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಮೂರು ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ 10 ಬಾರಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರೊಂದಿಗೆ ಹೊಂದಾಣಿಕೆ ಏರ್ಪಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಶಿವಮೊಗ್ಗದಲ್ಲಿ ನಡೆದ ಗಣಿ ದುರಂತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಚಾಮರಾಜನಗರದಲ್ಲಿ ಗಣಿಗಾರಿಕೆಯಿಂದ ಎಲ್ಲೆಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ತಿಳಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
Advertisement
ನಾನು ಇಚ್ಛೆಪಟ್ಟು ಕೃಷಿ ಖಾತೆಯನ್ನು ತೆಗೆದುಕೊಂಡಿದ್ದು, ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಹೇಳಿದರು.