ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಕ್ಯಾತೆ ಸದ್ಯಕ್ಕೆ ಮುಗಿಯಲ್ಲ. ಪ್ರಬಲ ಖಾತೆಗಳಿಗೆ ಬೇಡಿಕೆ ಇಟ್ಟಿರುವ ಆನಂದ್ ಸಿಂಗ್ ಮತ್ತು ಎಂಟಿಬಿರನ್ನು ಮನವೊಲಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ. ಖಾತೆ ಬದಲಾಯಿಸುವ ಭರವಸೆ ಕೊಡದ ಹಿನ್ನೆಲೆ ಆನಂದ್ ಸಿಂಗ್ ಸಿಟ್ಟು ಮುಂದುವರೆಸಿದ್ದು, ಎಂಟಿಬಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಕಗ್ಗಂಟು ಮುಂದುವರೆದಿದೆ. ಕೇಳಿದ ಖಾತೆಗಳು ಸಿಗಲಿಲ್ಲ ಅಂತ ಅಸಮಾಧಾನಗೊಂಡಿದ್ದ ಸಚಿವರಾದ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್, ಇಂದು ಸಿಎಂ ಬೊಮ್ಮಾಯಿ ಭೇಟಿ ಮಾಡಿ ಖಾತೆ ಬದಲಾವಣೆಗೆ ಪಟ್ಟು ಮುಂದುವರಿಸಿದರು. ಖಾತೆ ಬದಲಾಯಿಸುವ ವಿಷಯ ಹೈಕಮಾಂಡ್ ಗೆ ಬಿಟ್ಟಿದ್ದು. ವಿಚಾರ ಹೈಕಮಾಂಡ್ ಗಮನಕ್ಕೆ ತರುವುದಾಗಿ ಬೊಮ್ಮಾಯಿ ಭರವಸೆ ಕೊಟ್ಟು ಕಳಿಸಿದ್ದಾರೆ.
Advertisement
Advertisement
ಸಿಎಂ ಅವರ ಈ ಭರವಸೆ ಅಸಮಧಾನಿತರಿಗೆ ಸಮಾಧಾನ ತಂದಿಲ್ಲ. ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಎಂಟಿಬಿ ನಾಗರಾಜ್ ಹೋಗಿದ್ದಾರೆ. ನಾನು ಹೆಚ್ಚು ದಿನ ಕಾಯೋದಿಲ್ಲ, ನನಗೆ ಬೇಗ ಬೇರೆ ಖಾತೆ ಕೊಡಿ, ಅಲ್ಲಿಯವರೆಗೂ ಕೊಟ್ಟಿರುವ ಖಾತೆಗಳನ್ನ ನಿಭಾಯಿಸೋದಾಗಿ ಸಿಎಂಗೆ ಎಂಟಿಬಿ ಹೇಳಿ ಹೋಗಿದ್ದಾರೆನ್ನಲಾಗಿದೆ. ಇತ್ತ ಆನಂದ್ ಸಿಂಗ್ ಮಾತ್ರ ಅಸಮಾಧಾನ ಮುಂದುವರೆಸಿದ್ದು, ನನಗೆ ಪದೇ ಪದೇ ಅನ್ಯಾಯ ಆಗ್ತಿದೆ. ಈ ಸಲ ನಾನು ಕಾಯೋದಿಲ್ಲ ಎಂದು ಸಿಎಂಗೆ ಎಚ್ಚರಿಸಿ ಹೋಗಿದ್ದಾರೆ ಎನ್ನಲಾಗಿದೆ. ಆನಂದ್ ಸಿಂಗ್, ಕುಟುಂಬಸ್ಥರು, ಆಪ್ತರು, ಹಿತೈಷಿಗಳ ಜತೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ 2013ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಯ್ತು
Advertisement
Advertisement
ಇಬ್ಬರು ವಲಸಿಗ ಸಚಿವರ ಖಾತೆ ಕಗ್ಗಂಟು ಸಿಎಂಗೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಮಧ್ಯೆ ಗೊಂದಲ ನಿವಾರಣೆ ಕುರಿತು ಸಿಎಂ ಬೊಮ್ಮಾಯಿ, ಇಂದು ಮಧ್ಯಾಹ್ನ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಈ ಸಲ ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ನೇರ ಭಾಗವಹಿಸಿದೆ. ಹೀಗಾಗಿ ಯಾರೂ ಏನೂ ಮಾಡಲಾಗದಂಥ ಸನ್ನಿವೇಶ ನಿರ್ಮಾಣವಾಗಿದೆ. ಆನಂದ್ ಸಿಂಗ್ ಮತ್ತು ಎಂಟಿಬಿರನ್ನು ಕರೆಸಿ ಮಾತಾಡೋದಾಗಿ ಬಿಎಸ್ವೈ ಸಿಎಂಗೆ ಭರವಸೆ ಕೊಟ್ಟಿದ್ದಾರೆ. ಒಂದೊಮ್ಮೆ ಅವರಿಬ್ರೂ ಪಟ್ಟು ಮುಂದುವರೆಸಿದರೆ, ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರುವುದು ಉತ್ತಮ ಎಂದು ಯಡಿಯೂರಪ್ಪ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕೇಳಿದ ಖಾತೆ ಕೊಡಿಸ್ಲಿಲ್ಲ ಎಂದು ಯಡಿಯೂರಪ್ಪ ಮೇಲೂ ಆನಂದ್ ಸಿಂಗ್ ಮತ್ತು ಎಂಟಿಬಿ ಮುನಿಸಿಕೊಂಡಿದ್ದಾರೆ. ಖಾತೆ ಬದಲು ಮಾಡುವ ಸಂಬಂಧ ಇಬ್ಬರೂ ಸಿಎಂ ಬೊಮ್ಮಾಯಿಯವ್ರನ್ನು ಮಾತ್ರ ಭೇಟಿ ಮಾಡಿದ್ದು, ಯಡಿಯೂರಪ್ಪ ಭೇಟಿ ಮಾಡದಿರುವ ಮೂಲಕ ಮುನಿಸು, ಸಿಟ್ಟು ಪ್ರದರ್ಶಿಸಿದ್ದಾರೆ. ಒಟ್ಟಿನಲ್ಲಿ ವಲಸಿಗರ ಖಾತೆ ಕಗ್ಗಂಟಿನ ತಾಪಕ್ಕೆ ಸಿಎಂ ಇಕ್ಕಟ್ಟಿಗೆ ಸಿಲುಕಿರೋದಂತೂ ಹೌದು.