– ಕೊನೆ ಎರಡು ಸುತ್ತಿನಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್
ಬೆಳಗಾವಿ: ಕುಂದಾ ನಗರಿ ಬೆಳಗಾವಿಯನ್ನ ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದ್ದು, ಮಂಗಳಾ ಅಂಗಡಿ 2,903 ಮತಗಳ ಅಂತರದಲ್ಲಿ ಗೆಲುವಿನ ಮಾಲೆ ಧರಿಸಿದ್ದಾರೆ.
ಒಟ್ಟು 81 ಸುತ್ತಿನ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲವುನ್ನುಂಟು ಮಾಡಿತ್ತು. ಆರಂಭದಲ್ಲಿ ಸುಮಾರು 40 ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ನಂತರ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದರು. 75ನೇ ಸುತ್ತಿನ ಬಳಿಕ ಸತೀಶ್ ಜಾರಕಿಹೊಳಿ ಅವರ ಮುನ್ನಡೆಯ ಅಂತರ ಕಡಿಮೆಯಾಗುತ್ತಾ ಬಂತು. 80ನೇ ಸುತ್ತಿನಲ್ಲಿ ಮಂಗಳಾ ಅಂಗಡಿ 3101 ಮತಗಳ ಭಾರೀ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್‍ಗೆ ಶಾಕ್ ನೀಡಿದರು.
79ನೇ ಸುತ್ತಿನಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿತ್ತು. ಕೊನೆಯ 4 ಸುತ್ತಿನಲ್ಲಿ ಮುನ್ನಡೆಯನ್ನು ಉಳಿಸಿಕೊಂಡ ಬಂದ ಮಂಗಳಾ ಅಂಗಡಿ ಕೊನೆಗೆ ಗೆಲುವಿನ ನಗೆ ಬೀರಿದರು.
88 ಸುತ್ತಿನಲ್ಲಿ ಬಿಜೆಪಿ 4,123 ಮತಗಳಿಂದ ಮುಂದಿದ್ದರೆ 89 ಸುತ್ತಿನಲ್ಲಿ ಈ ಅಂತರ 2,941 ಕುಸಿದಿತ್ತು. ಎಂಇಎಸ್ ಪರ 1 ಲಕ್ಷಕ್ಕೂ ಹೆಚ್ಚು ಮತಗಳು ಬಿದ್ದ ಬಿಜೆಪಿಗೆ ಭಾರೀ ಹೊಡೆತ ನೀಡಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 3,91,304 ಮತಗಳಿಂದ ಗೆದ್ದುಕೊಂಡಿತ್ತು. ಸುರೇಶ್ ಅಂಗಡಿಗೆ 7,61,991 ಮತಗಳು ಸಿಕ್ಕಿದ್ದರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸಾಧುನವರ್ ಅವರಿಗೆ 3,70,687 ಮತಗಳು ಸಿಕ್ಕಿತ್ತು.
ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ನಡೆಯುತ್ತಿದೆ. ಈ ಮಧ್ಯೆ ಮಧ್ಯಾಹ್ನದ ವೇಳೆ ಸರ್ವರ್ ಸಮಸ್ಯೆಯಾದ ಹಿನ್ನೆಲೆಯಲ್ಲಿ 20 ನಿಮಿಷ ಎಣಿಕೆಯಾದ ಮತಗಳ ವಿವರವನ್ನು ಅಪ್ಲೋಡ್ ಮಾಡಲು ಸಾಧ್ಯವಾಗದೇ ಸಿಬ್ಬಂದಿ ಸುಮ್ಮನೆ ಕುಳಿತ ಪ್ರಸಂಗ ನಡೆಯಿತು.
ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಸ್ಪರ್ಧಿಸಿದ್ದರು.