-ಬಿಜೆಪಿಗೆ ಕುಮಾರಸ್ವಾಮಿ ಬೆಂಬಲವಿದೆ
-ಎಚ್‍ಡಿಕೆ ಹೇಳಿದಂತೆ ನಾಮನಿರ್ದೇಶನ
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳು, ನಡವಳಿಕೆಗಳು ನೋಡಿದರೆ ಅವರು ನಮ್ಮ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ನಮ್ಮ ಸರ್ಕಾರವನ್ನು ಅವರು ಟೀಕಿಸಿಲ್ಲ. ರಾಮನಗರದಲ್ಲಿ ನೆಲೆ ಕಳೆದುಕೊಳ್ಳುವ ಆತಂಕ ಕುಮಾರಸ್ವಾಮಿ ಅವರಿಗೆ ಎದುರಾಗಿದೆ. ಜಿಲ್ಲೆಯಲ್ಲಿ ಡಿಕೆಶಿ ಸೋದರರ ಹಾವಳಿ ಹೆಚ್ಚಾಗಿದ್ದು, ಪರಿಣಾಮ ಅವರು ಬಿಜೆಪಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಕ್ಷದಿಂದಲೂ ಅವರಿಗೆ ಹಲವು ಪ್ರಯೋಜನಗಳಾಗುತ್ತಿವೆ ಎಂದು ಹೇಳಿದರು.
Advertisement
Advertisement
ಜಿಲ್ಲೆಯಲ್ಲಿ ಡಿಕೆಶಿ ಸಹೋದರರು ಆಪರೇಷನ್ ಆರಂಭ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಅವರ ಪಕ್ಷದಲ್ಲಿ ಭವಿಷ್ಯ ಇಲ್ಲ. ಆದ್ದರಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಬರಲಿ. ಡಿಕೆ ಶಿವಕುಮಾರ್ ಅವರು ಚುನಾವಣೆಯಲ್ಲಿ ಗೆಲುವು ಪಡೆಯಲು ಕುಮಾರಸ್ವಾಮಿ ಸಹಾಯ ತೆಗೆದುಕೊಂಡಿದ್ದರು. ಆದರೆ ಈಗ ಅವರ ನಡುವೆ ಒಗ್ಗಟ್ಟಿಲ್ಲ. ಇಬ್ಬರ ನಡುವೆ ಅಂತರ್ ಯುದ್ಧ ಪ್ರಾರಂಭವಾಗಿದೆ ಎಂದು ಆರೋಪ ಮಾಡಿದರು.
Advertisement
ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದಿಂದಲೂ ಸಹಕಾರ ಲಭಿಸುತ್ತಿದೆ. ಜಿಲ್ಲೆಯಲ್ಲಿ ಅವರು ಹೇಳಿದಂತೆ ವರ್ಗಾವಣೆ ಹಾಗೂ ನಾಮನಿದೇರ್ಶನಗಳು ನಡೆಯುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಗೊಂದಲ ಉಂಟಾಗಿದೆ. ನಾನು ಅವರಿಗೆ ನೇರವಾಗಿ ಆಹ್ವಾನ ನೀಡುತ್ತಿದ್ದೇನೆ. ಅವರು ಆಚೆ ನಿಂತು ಸರ್ಕಾರಕ್ಕೆ ನೀಡುವ ಬದಲು ಬಿಜೆಪಿಗೆ ಸೇರ್ಪಡೆ ಆಗಲಿ. ಇದರಿಂದ ನಮಗಾದರೂ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಲಭಿಸಲಿದೆ. ನಮ್ಮ ಕಾರ್ಯಕರ್ತರ ಕೆಲಸ ನಡೆಯಬೇಕು ಎಂಬುವುದು ನನ್ನ ಉದ್ದೇಶವಷ್ಟೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಕ್ಷದ ಕುರಿತು ಬೇಸರ ವ್ಯಕ್ತಪಡಿಸಿದರು.
Advertisement
ಇದಕ್ಕೂ ಮುನ್ನ ವಿಧಾನ ಪರಿಷತ್‍ಗೆ ನಾಮನಿದೇರ್ಶನಗೊಂಡ ಐವರು ಸದಸ್ಯರು ಇಂದು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರ ಮಾಡಿದರು. ಮೊದಲಿಗೆ ಸಿ.ಪಿ.ಯೋಗೀಶ್ವರ್ ಅವರಿಂದ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಳಿಕ ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಬುಡ್ನ ಸಿದ್ದಿ ಹಾಗೂ ಡಾ. ತಳವಾರ್ ಸಾಬಣ್ಣ ಅವರು ಪ್ರಮಾಣ ಸ್ವೀಕಾರ ಮಾಡಿದರು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಐವರಿಗೂ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಸಚಿವ ಸಿಟಿ ರವಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.