– ವಿಧಾನ ಪರಿಷತ್‍ನವರು ಬಂದ್ರೆ ಭಯ ಆಗುತ್ತಪ್ಪ!
– ದೆಹಲಿಯಿಂದ ಒಳ್ಳೆ ಸುದ್ದಿ ಬರುತ್ತೆ
ಧಾರವಾಡ: ಸಿಎಂ ದೆಹಲಿಗೆ ಹೋಗಿದ್ದು ಯಾಕೆ ಅಂತಾ ನನಗೆ ಗೊತ್ತಿಲ್ಲ, ಆದರೆ ದೆಹಲಿಯಿಂದ ಖಂಡಿತ ಒಳ್ಳೇ ಸುದ್ದಿ ಬರುತ್ತೆ. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರು ಒಳ್ಳೆ ತೀರ್ಮಾನ ಮಾಡಿ ಕಳಿಸುತ್ತಾರೆ, ಕರ್ನಾಟಕ ರಾಜ್ಯಕ್ಕೆ ಏನು ಒಳ್ಳೆದಾಗಬೇಕೋ ಅದನ್ನೇ ಮಾಡಿ ಕಳುಹಿಸುತ್ತಾರೆ ಎಂದು ಸಿಎಂ ದೆಹಲಿಗೆ ಹೋಗಿರುವ ಕುರಿತಾಗಿ ಹೇಳಿದ್ದಾರೆ.
Advertisement
Advertisement
ಪಕ್ಷಕ್ಕೆ ಬಂದವರ ಋಣ ತೀರಿಸಬೇಕು: ಎಲ್ಲ ಶಾಸಕರಿಗೂ ಮಂತ್ರಿ ಆಗುವ ಬಯಕೆ ಇರುತ್ತೆ, ಆದರೆ ಅದಕ್ಕೊಂದು ಲಿಮಿಟ್ ಇದೆ ಅಲ್ವಾ. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ, ಜೆಡಿಎಸ್, ಕಾಂಗ್ರೆಸ್‍ನಿಂದ ಅನೇಕರು ಬಂದಿದ್ದಾರೆ, ಅವರ ಋಣ ತೀರಿಸಬೇಕಿದೆ. ಯಾರು ಪಕ್ಷಕ್ಕೆ ಬಂದಿದ್ದಾರೋ ಅವರೆಲ್ಲ ಈಗ ಬಿಜೆಪಿ ಕಾರ್ಯಕರ್ತರಾಗಿದ್ದಾರೆ, ಅವರು ಹೊರಗಿನಿಂದ ಬಂದವರು ಅಂತಾ ನಮಗೂ ಅನಿಸುತ್ತಿಲ್ಲ, ಅವರ ಬಗ್ಗೆ ಕೇಂದ್ರದ ನಾಯಕರು ಒಳ್ಳೇ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
Advertisement
Advertisement
ಸಂಕ್ರಾಂತಿ ಬಳಿಕ ಬದಲಾವಣೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಬೆಳಗ್ಗೆ ಯತ್ನಾಳರನ್ನು ನಾನು ಕೇಳಿದ್ದೇನೆ, ಲಿಂಗಾಯತ ಸಮಾಜದ ಮೀಸಲಾತಿ ವಿಚಾರವಾಗಿ ಅವರು ಮಾತನಾಡಿದ್ದಾರಂತೆ, ಅವರ ಈ ಹೇಳಿಕೆ ಬೇರೆ ವಿಚಾರವಾಗಿದೆ ಅಂತಾ ನನ್ನ ಜೊತೆ ಮಾತನಾಡಿದ್ದಾರೆ. ಇನ್ನು ಯತ್ನಾಳರ ಹಿಂದಿನ ಹೇಳಿಕೆಗಳ ವಿಚಾರವಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ. ಶಿಸ್ತು ಕ್ರಮಕ್ಕೆ ಕೇಂದ್ರಕ್ಕೂ ಕಳುಹಿಸಿದ್ದಾರೆ, ಕೇಂದ್ರದ ಶಿಸ್ತು ಸಮಿತಿ ಏನ ಕ್ರಮ ಕೈಗೊಳ್ಳುತ್ತದೆಯೋ ನೋಡಬೇಕಿದೆ ಎಂದು ತಿಳಿಸಿದರು.
ನಮಗೆ ಭಯ ಆಗುತ್ತಪ್ಪ: ಎಂಎಲ್‍ಎ ಶಾಲೆ ದತ್ತು ಯೋಜನೆ ಬೇಗ ಸದುಪಯೋಗ ಪಡಿಸಿಕೊಳ್ಳಿ, ಇಲ್ಲದೇ ಹೋದಲ್ಲಿ ಅವರು ಗುಡಿ ಗೋಪುರಕ್ಕೆ ಹಣ ಕೊಡ್ತಾರೆ. ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐಗೆ ಈಶ್ವರಪ್ಪ ಸೂಚನೆ ನೀಡಿದ್ದಾರೆ. ಶಾಸಕರ ಕೈಯಲ್ಲಿನ ದುಡ್ಡು ಬೇಗ ಬಳಸಿಕೊಳ್ಳಿ, ಗುಡಿ ಗೋಪುರದಲ್ಲಿ ವೋಟ್ ಇರುತ್ತೇ. ಹಳ್ಳಿಯ ದೇವಸ್ಥಾನಕ್ಕೆ ದುಡ್ಡು ಕೊಟ್ಟರೆ 200-300 ವೋಟ್ ಸಿಗುತ್ತೆ, ಶಾಲೆಗೆ ಕೊಟ್ಟರೇ ವೋಟ್ ಎಲ್ಲಿ ಸಿಗುತ್ತೆ, ಬೇಗ ದತ್ತು ಯೋಜನೆ ಬಳಸಿಕೊಳ್ಳಿ, ಸಂಕೋಚ ಇಲ್ಲದೇ ಶಾಲೆಗಾಗಿ ಎಂಎಲ್‍ಎಗಳ ಕಡೆ ಹಣ ಕೇಳಿ ಎಂದರು. ಇದೇ ವೇಳೆ ಸಭೆಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರಗೆ ನೋಡಿ ವಿಧಾನ ಪರಿಷತ್‍ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ ಎಂದು ಈಶ್ವರಪ್ಪ ಹೇಳಿದ್ದಾರೆ.