ನವದೆಹಲಿ: ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಆಡಲು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‍ಗೆ ವಿದಾಯ ಹೇಳಿದ್ದ ಯುವರಾಜ್ ಅವರು, ನಂತರ ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸುವಂತೆ ಅವರಿಗೆ ಕರೆಗಳು ಬಂದಿವೆ ಎನ್ನಲಾಗಿದೆ. ಇದರ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಜೇಸನ್ ವಾರ್ನೆ, ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಬಿಬಿಎಲ್ ಆಡಳಿತ ಮಂಡಳಿ ಕೂಡ ಯುವರಾಜ್‍ಗಾಗಿ ತಂಡವನ್ನು ಆಯ್ಕೆ ಮಾಡುತ್ತಿದೆ ಎನ್ನಲಾಗಿದೆ.
ಈವರೆಗೂ ಇಂಡಿಯಾದ ಯಾವುದೇ ಆಟಗಾರ ಬಿಗ್ ಬ್ಯಾಶ್ ಲೀಗ್ ಆಡಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿನ್ ಅವರನ್ನು ಸಿಡ್ನಿ ಥಂಡರ್ ತಂಡ ಬಿಗ್ ಬ್ಯಾಶ್ ಆಡುವಂತೆ 2014ರಲ್ಲಿ ಕೇಳಿತ್ತು. ಆದರೆ ಸಚಿನ್ ಅವರು ಆಡಿರಲಿಲ್ಲ. ಇದಾದ ನಂತರ ಸದ್ಯ ಎರಡು ವಿದೇಶಿ ಟೂರ್ನಿ ಆಡಿರುವ ಯುವರಾಜ್ ಅವರನ್ನು ಬಿಬಿಎಲ್ ಆಡುವಂತೆ ಕೇಳಿಕೊಂಡಿದೆ. ಆದರೆ ಯುವರಾಜ್ ಬಿಬಿಎಲ್‍ನಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಬಿಸಿಸಿಐ ನಿಯಮದ ಪ್ರಕಾರ ಪ್ರಸ್ತುತ ಇಂಡಿಯಾ ಟೀಂನಲ್ಲಿ ಆಡುತ್ತಿರುವ ಯಾವುದೇ ಆಟಗಾರ ಕೂಡ ವಿದೇಶಿ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ನಿವೃತ್ತಿ ಹೊಂದಿದ ಬಳಿಕ ಬಿಸಿಸಿಐಯಿಂದ ಅನುಮತಿ ಪಡೆದು ವಿದೇಶಿ ಟೂರ್ನಿಗಳಲ್ಲಿ ಮಾಜಿ ಆಟಗಾರರು ಭಾಗಹಿಸಬಹುದು. ಅಂತೆಯೇ ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಾಹಿರ್ ಖಾನ್, ಪ್ರವೀಣ್ ತಾಂಬೆ ಮತ್ತಿತರು ವಿದೇಶಿ ಟೂರ್ನಿಯಲ್ಲಿ ಭಾಗಹಿಸಿದ್ದಾರೆ.