ದೊಡ್ಮನೆಯಿಂದ ಈ ವಾರ ಮತ್ತೊಬ್ಬರು ಹೊರ ಹೋಗಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.
ಹೌದು ಶಮಂತ್ ಬ್ರೋ ಗೌಡ ಅವರ ಬರಹ, ಕವನ ರಚನೆ, ತಾವು ಬರೆದ ಕವನವನ್ನು ಉಲ್ಟಾ ಓದುವುದು ಹೀಗೆ ತಮ್ಮ ವಿಭಿನ್ನ ಟ್ಯಾಲೆಂಟ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದೆ. ಲಕ್ಕಿ ಬಾಯ್ ಎಂದೇ ಕರೆಸಿಕೊಂಡಿದ್ದ ಶಮಂತ್, ಫಿನಾಲೆ ವೀಕ್‍ಗೆ ಎಂಟ್ರಿ ಕೊಡುವ ಮುನ್ನವೇ ಮನೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಮನೆಯಲ್ಲಿ ಸದಸ್ಯರ ಸಂಖ್ಯೆ ಆರಕ್ಕೆ ಇಳಿಕೆಯಾಗಿದೆ.
ನಿನ್ನೆಯಷ್ಟೇ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದರು. ಇಂದು ಶಮಂತ್ ಬ್ರೋ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಈಗ ಸದ್ಯ ಮನೆಯಲ್ಲಿ ಕೆ.ಪಿ.ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.
ಶಮಂತ್ ಮೊದಲ ಇನ್ನಿಂಗ್ಸ್ ನಲ್ಲೇ ಎಲಿಮಿನೇಟ್ ಆಗಿದ್ದರು. ಆದರೆ ಅದೃಷ್ಟವೆಂಬಂತೆ ಬಚಾವ್ ಆಗಿದ್ದರು. ಬಳಿಕ ರಘು ಅವರು ಶಮಂತ್ ಅವರನ್ನು ಸೇವ್ ಮಾಡಿದ್ದರು. ಹೀಗೆ ಅವರ ಅದೃಷ್ಟದ ಫಲವಾಗಿ ಇಲ್ಲಿವರೆಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಫಿನಾಲೆಗೆ ಇನ್ನೊಂದು ವಾರ ಇರುವಾಗ ಎಲಿಮಿನೇಟ್ ಆಗಿದ್ದಾರೆ.
ತಮ್ಮ ವಿಭಿನ್ನ ಕವನಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಮಂತ್ ಬ್ರೋ ಗೌಡ, ಸಖತ್ ಆ್ಯಕ್ಟಿವ್ ಆಗಿದ್ದರು. ಟಾಸ್ಕ್ ಗಳನ್ನು ಸಹ ಅಷ್ಟೇ ಆ್ಯಕ್ಟಿವ್ ಆಗಿ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಶಮಂತ್ ರಚಿಸಿದ ಹಾಡುಗಳನ್ನು ಮೆಚ್ಚಿ ಬಿಗ್ ಬಾಸ್ ಬೆಳಗ್ಗೆ ಇವರ ಹಾಡುಗಳನ್ನು ಪ್ರಸಾರ ಮಾಡಿರುವುದೂ ಇದೆ. ಅಲ್ಲದೆ ಕವನವನ್ನು ಉಲ್ಟಾ ಓದುವ ಮೂಲಕ ಸಹ ಗಮನ ಸೆಳೆದಿದ್ದರು. ಆದರೆ ಈ ವಾರ ಅವರು ದೊಡ್ಮನೆಯಿಂದ ಹೊರ ನಡೆದಿದ್ದಾರೆ.