ಬಿಗ್ ಬಾಸ್ ಮನೆಯಿಂದ ಆಸ್ಪತ್ರೆಗೆ ದಾಖಲಾಗಿರುವ ದಿವ್ಯಾ ಉರುಡುಗ ಮತ್ತೆ ಮನೆಗೆ ವಾಪಸ್ ಆಗ್ತಾರಾ ಈ ಪ್ರಶ್ನೆಯನ್ನು ಇಟ್ಟುಕೊಂಡು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ 67ನೇ ದಿನ ಮನೆಯನ್ನು ತೊರೆದಿದ್ದರು. ತೊರೆದ ಬಳಿಕ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದರಿಂದ ಪೂರ್ಣವಾಗಿ ಮನೆಯನ್ನು ಬಿಟ್ಟುಹೋಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಅವರು ಈಗ ಸೀಕ್ರೇಟ್ ರೂಮಿನಲ್ಲಿರಬಹುದು ಎಂಬ ಅನುಮಾನವನ್ನು ಅಭಿಮಾನಿಗಳು ಹೊರಹಾಕಿದ್ದಾರೆ.
ದಿವ್ಯಾ ಯೂರಿನರಿ ಟ್ರ್ಯಾಕ್ ಇನ್‍ಫೆಕ್ಷನ್‍ನಿಂದ ಬಳಲಿದ್ದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಮಸ್ಯೆ ಬಹಳ ಗಂಭೀರ ಅಲ್ಲದ ಕಾರಣ ಕೆಲ ದಿನಗಳಲ್ಲಿ ವಾಸಿಯಾಗಬಹುದು. ವಾಸಿಯಾದರೂ ಸದ್ಯ ಈಗ ಕೊರೊನಾ ಇದ್ದು ಬಿಗ್‍ಬಾಸ್ ಬಯೋ ಬಬಲ್‍ನಿಂದ ಹೊರಗಡೆ ಬಂದ ಕಾರಣ ಮತ್ತೆ ಮನೆ ಪ್ರವೇಶಕ್ಕೆ ಕ್ವಾರಂಟೈನ್ ಅಗತ್ಯ. ಹೀಗಾಗಿ ಸೀಕ್ರೇಟ್ ರೂಮ್ ಹೆಸರಿನಲ್ಲಿ ದಿವ್ಯಾ ಕ್ವಾರಂಟೈನ್ ಆಗಿ ಸಂಪೂರ್ಣ ಆರೋಗ್ಯ ಸುಧಾರಿಸಿದ ಮೇಲೆ ಮತ್ತೆ ಅವರನ್ನು ಮನೆಗೆ ಕಳುಹಿಸಬಹುದು ಎಂಬ ಮಾತು ವ್ಯಕ್ತವಾಗುತ್ತಿದೆ.
ಬಿಗ್‍ಬಾಸ್ 8ನೇ ಅವೃತ್ತಿಯಲ್ಲಿ ಮನರಂಜನೆ, ಟಾಸ್ಕ್ ಈ ಎರಡರಲ್ಲೂ ದಿವ್ಯಾ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಟಾಪ್ 5 ಒಳಗಡೆ ಬರುವ ಸ್ಪರ್ಧಿಗಳ ಪೈಕಿ ಇವರು ಒಬ್ಬರು ಎಂಬ ಅಭಿಪ್ರಾಯವಿದೆ. ಈ ವಾದದ ಜೊತೆ ಬಹಳ ಕಡಿಮೆ ಸಲ ಎಲಿಮಿನೇಷನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಅರವಿಂದ್ ಮತ್ತು ದಿವ್ಯಾ ಅವರ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಹೆಸರಿನಲ್ಲಿ ಭಾರೀ ಸಂಖ್ಯೆಯ ಫ್ಯಾನ್ ಪೇಜ್‍ಗಳು ಸೃಷ್ಟಿಯಾಗಿದೆ. ಈ ಎಲ್ಲ ಕಾರಣಕ್ಕೆ ಶೋಗೆ ಒಂದು ಟ್ವಿಸ್ಟ್ ನೀಡಲು ವಾಹಿನಿ ದಿವ್ಯಾ ಅವರನ್ನು ಕ್ವಾರಂಟೈನ್ ನೆಪದಲ್ಲಿ ಸೀಕ್ರೇಟ್ ರೂಮಿನಲ್ಲಿ ಇಟ್ಟಿರುವ ಸಾಧ್ಯತೆಯಿದೆ.
ಅಭಿಮಾನಿಗಳು ಈ ರೀತಿ ಹೇಳಲು ಕಾರಣವಿದೆ. ಒಂದು ವೇಳೆ ನೇರವಾಗಿ ಎಲಿಮಿನೇಟ್ ಆಗಿದ್ದರೆ ಅದು ಬೇರೆ ವಿಚಾರ. ಆದರೆ ಇಲ್ಲಿ ಅರೋಗ್ಯ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಈ ಹಿಂದೆ ಉತ್ತಮವಾಗಿ ಆಡುತ್ತಿದ್ದ ರಾಜೀವ್ ಅವರು ಔಟ್ ಆದಾಗಲೂ ಅವರು ಸೀಕ್ರೇಟ್ ರೂಮಿನಲ್ಲಿರಬಹುದು ಎಂಬ ಮಾತು ಕೇಳಿ ಬಂದಿತ್ತು. ನಂತರದ ಎಪಿಸೋಡ್‍ನಲ್ಲಿ ಎಲ್ಲೂ ರಾಜೀವ್ ಕಾಣಿಸದ ಹಿನ್ನೆಲೆಯಲ್ಲಿ ಅವರು ಸೀಕ್ರೇಟ್ ರೂಮಿನಲ್ಲಿ ಇಲ್ಲ ಎನ್ನುವುದು ದೃಢವಾಗಿತ್ತು. ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಗಳು ಸೀಕ್ರೇಟ್ ರೂಮಿಗೆ ಹೋಗುವುದು ಸಾಮಾನ್ಯ. ಈ ಬಾರಿ ಯಾರೂ ಸೀಕ್ರೇಟ್ ರೂಮಿಗೆ ಹೋಗಿಲ್ಲ. ಈ ಕಾರಣಕ್ಕೆ ದಿವ್ಯಾ ಅವರು ಮತ್ತೆ ಮನೆ ಪ್ರವೇಶಿಸುತ್ತಾರೆ ಎಂಬ ಅನುಮಾನ ಅಭಿಮಾನಿಗಳದ್ದು.
ಅಭಿಮಾನಿಗಳ ಹಾರೈಕೆ ನಿಜವಾಗುತ್ತಾ? ಇಲ್ಲವೋ ಎನ್ನುವುದು ಮುಂದಿನ ಎಪಿಸೋಡ್‍ನಲ್ಲಿ ತಿಳಿಯಲಿದೆ. ದಿವ್ಯಾ ಮತ್ತೆ ಬಿಗ್ ಬಾಸ್ ಶೋಗೆ ಬರಬೇಕೇ? ಬರಬೇಕಾದರೆ ಯಾಕೆ ಬರಬೇಕು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.