– ತೀವ್ರ ವಿರೋಧದ ಹಿನ್ನೆಲೆ ಪ್ರಸ್ತಾವನೆ ವಾಪಸ್
ಬೆಂಗಳೂರು: ಸಿಲಿಕಾನ್ ಸಿಟಿ ಜನತೆ ಕೊರೊನಾ ಲಾಕ್‍ಡೌನ್‍ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಹೊತ್ತಲ್ಲೇ ಬಿಬಿಎಂಪಿ ಕಸ ಸಂಗ್ರಹಕ್ಕೂ ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿತ್ತು. ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಇದೀಗ ಈ ಪ್ರಸ್ತಾವನೆಯನ್ನು ಬಿಬಿಎಂಪಿ ಕೈ ಬಿಟ್ಟಿದೆ.

ಬಿಬಿಎಂಪಿ ರೂಪಿಸಿದ್ದ ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಶುಲ್ಕ ಸಂಗ್ರಹ ಸಂಬಂಧ ಬೆಸ್ಕಾಂಗೆ ಪತ್ರ ಬರೆದಿದ್ದು, ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಇದು ಜಾರಿಗೆ ಬರುವ ಸಾಧ್ಯತೆ ಇತ್ತು.
ಪ್ರತಿ ತಿಂಗಳು ಮನೆಯ ಅಳತೆಗೆ ತಕ್ಕಂತೆ ಹಣ ಸಂಗ್ರಹ. ನೀರು, ವಿದ್ಯುತ್ ಬಿಲ್ ಕಟ್ಟುವ ರೀತಿ ಕಸಕ್ಕೂ ದುಡ್ಡನ್ನು ಕಟ್ಟಬೇಕು. ಬೆಸ್ಕಾಂ ಜೊತೆಗೆ ಈ ಸಂಬಂಧ ಬಿಬಿಎಂಪಿ ಮಾತುಕತೆ ನಡೆಸುತ್ತಿದ್ದು, ಒಪ್ಪಿಗೆ ಸಿಕ್ಕಿದ್ದರೆ ವಿದ್ಯುತ್ ಬಿಲ್ ಜೊತೆ ಕಸದ ಬಿಲ್ ಸಹ ಬರುತ್ತಿತ್ತು. ಒಂದು ವೇಳೆ ಬೆಸ್ಕಾಂ ಒಪ್ಪದೇ ಇದ್ದರೆ ಆಸ್ತಿ ತೆರಿಗೆ ಕಟ್ಟುವಾಗ ವಸೂಲಿಗೂ ಚಿಂತನೆ ನಡೆದಿತ್ತು.
ಮನೆ ಮಾತ್ರವಲ್ಲದೇ ಕಟ್ಟಡ, ಐಷಾರಾಮಿ ಕಲ್ಯಾಣಮಂಟಪಗಳಿದ್ದರೆ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಆಸ್ಪತ್ರೆ, ಹೋಟೆಲ್, ವಾಣಿಜ್ಯ ಕಟ್ಟಡಗಳಿಗೂ ಪ್ರತ್ಯೇಕ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿತ್ತು.
ಯಾರಿಗೆ ಎಷ್ಟೆಷ್ಟು ಶುಲ್ಕ?
30*40 ಸೈಟ್ – 30 ರೂ.
60*40 ಸೈಟ್ – 40 ರೂ.
60*40 ಮೇಲ್ಪಟ್ಟು- 50 ರೂ.
ಹೋಟೆಲ್, ಛತ್ರ, ಆಸ್ಪತ್ರೆಗಳಿಗೆ ಶುಲ್ಕವೆಷ್ಟು?
10 ಸಾವಿರ ಚದರಡಿ – 300 ರೂ.
10,000-50,000 ಚದರಡಿ – 500 ರೂ.
50 ಸಾವಿರ ಮೇಲ್ಪಟ್ಟರೆ – 600 ರೂ.
ದೊಡ್ಡ ಕಲ್ಯಾಣಮಂಟಪ – 14,000 ರೂ.
ವಾಣಿಜ್ಯ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
1,000 ಚದರಡಿ ಕಟ್ಟಡಗಳಿಗೆ – 50 ರೂ.
1,000-5,000 ಚದರಡಿ ಕಟ್ಟಡಗಳಿಗೆ – 100 ರೂ.
5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.
ಕೈಗಾರಿಕಾ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
1,000 ಚದರಡಿ ಕಟ್ಟಡಗಳಿಗೆ – 100 ರೂ.
1,000-5,000 ಚದರಡಿ ಕಟ್ಟಡಗಳಿಗೆ – 200 ರೂ.
5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.
ಹೈಕೋರ್ಟ್ ಹೇಳಿದ್ದು ಏನು?
ಈ ಹಿಂದೆ ಪ್ರಕರಣ ಒಂದರ ವಿಚಾರಣೆ ಸಂದರ್ಭದಲ್ಲಿ ಕಸ ನಿರ್ವಹಣೆಗಾಗಿ ಬಿಬಿಎಂಪಿ ವರ್ಷಕ್ಕೆ 1 ಸಾವಿರ ಕೋಟಿ ಅಧಿಕ ವೆಚ್ಚ ಮಾಡುತ್ತಿದೆ. ಆದರೆ ಆಸ್ತಿ ತೆರಿಗೆ ಜೊತೆ ಸಂಗ್ರಹಿಸುತ್ತಿದ್ದ ಉಪಕರದಿಂದ ಕೇವಲ 40 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಸಣ್ಣ ನಗರಾಡಳಿತ ಸಂಸ್ಥೆಗಳೇ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸುತ್ತಿರುವಾಗ ಬಿಬಿಎಂಪಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.




