ಕನ್ನಡದ ಬಿಗ್‍ಬಾಸ್ ಅರ್ಧದಲ್ಲಿಯೇ ಕೊನೆಗೊಂಡಿದೆ. ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿರುವುದರಿಂದ ಎಲ್ಲ ರಿಯಾಲಿಟಿ ಶೋ, ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್ ಬಂದ್ ಆಗುತ್ತಿದೆ. ಮೇ 24ರವರೆಗೆ ಯಾರೂ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಬಿಗ್‍ಬಾಸ್ ಅಂತ್ಯವಾಗಲು ಕೂಡ ಇದೇ ಕಾರಣ. ಆದರೆ ಟ್ರೋಲ್ ಮಂದಿ ಲೆಕ್ಕಾಚಾರವೇ ಬೇರೆ. ಅವರು ಬೇರೆ ಕಾರಣವನ್ನು ಹುಡುಕಿ ತೆಗೆದಿದ್ದಾರೆ.
ಬಿಗ್‍ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ನಟಿ ದಿವ್ಯಾ ಸುರೇಶ್ ವೇದಿಕೆ ಮೇಲೆ ಮಾತನಾಡಿದ್ದರು. ಕಿಚ್ಚ ಸುದೀಪ್ ಜೊತೆ ತಮ್ಮ ಬದುಕಿನ ಕೆಲವು ವಿವರಗಳನ್ನು ಹಂಚಿಕೊಂಡಿದ್ದರು. ನಾನು ಒಂದು ಸೀರಿಯಲ್ ಮಾಡಿದೆ. ಆದರೆ ಆ ಸೀರಿಯಲ್ ಅರ್ಧಕ್ಕೆ ನಿಲ್ಲಿಸಿದರು. ಒಂದು ಸಿನಿಮಾ ಮಾಡಿದೆ. ಆ ಸಿನಿಮಾ ರಿಲೀಸ್ ಆಗಲೇ ಇಲ್ಲ. ನಾನು ಏನೇ ಮಾಡಿದರೂ ಅದು ಅರ್ಧಕ್ಕೆ ನಿಂತು ಹೋಗುತ್ತಿತ್ತು ಎಂದು ದಿವ್ಯಾ ಸುರೇಶ್ ಹೇಳಿದ್ದರು. ಅದೇ ಮಾತನ್ನು ನೆಟ್ಟಿಗರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ದೃಶ್ಯ ತುಣುಕು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಬಿಗ್‍ಬಾಸ್ ರದ್ದಾಗಿರುವುದಕ್ಕೂ ದಿವ್ಯಾ ಹೀಗೆ ಹೇಳಿರೂವುದಕ್ಕೂ ಏನೂ ಸಬಂಧವಿಲ್ಲ. ಆದರೆ ಟ್ರೋಲಿಗರು ಮಾತ್ರ ಫನ್ನಿ ಕ್ಯಾಪ್ಶನ್‍ಕೊಟ್ಟು ದಿವ್ಯಾ ಅವರ ಈ ಹೇಳಿಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಬಿಗ್‍ಬಾಸ್ ರದ್ದು ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ದಿವ್ಯಾ ಅವರು ಹೇಳಿರುವ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಬಿಗ್‍ಬಸ್ ಮನೆಯಿಂದ ಆಚೆ ಹೋಗಿರುವ ದಿವ್ಯಾ ಸುರೇಶ್ ಅವರಿಗೆ ಇನ್ನು ಹೆಚ್ಚಿನ ಅವಕಾಶಗಳು ಒದಗಿ ಬರುವ ಸಾಧ್ಯತೆಯಿದೆ. ಟಾಪ್ 5 ಒಳಗಡೆ ಬರುವ ಸ್ಪರ್ಧಿಗಳ ಪೈಕಿ ಇವರು ಇದ್ದಾರೆ ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ದಿವ್ಯಾ ಅವರಿಗೆ ಒಂದು ಉತ್ತಮ ವೇದಿಕೆಯನ್ನು ಬಿಗ್‍ಬಾಸ್ ನಿರ್ಮಿಸಿಕೊಟ್ಟಿದೆ. ಈಗ ಸಿಕ್ಕಿರುವ ಜನಪ್ರಿಯತೆಯನ್ನು ದಿವ್ಯಾ ಅವರು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.