ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಅಲ್ಲದೆ ಸಿನಿಮಾ, ಧಾರವಾಹಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಕೂಡ 72ನೇ ದಿನಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಗ್ ಬಾಸ್ ಮನೆಯನ್ನು ಕೋವಿಡ್ ಕೇಂದ್ರವನ್ನಾಗಿಸಲು ಸಿಎಂಗೆ ಮನವಿ ಮಾಡಲಾಗಿದೆ.
ಈ ಸಂಬಂಧ ಮನವಿ ಪತ್ರವನ್ನು ಟ್ವೀಟ್ ಮಾಡಿರುವ ನಿರ್ಮಾಪಕ ಭಾ.ಮ. ಹರೀಶ್, ಬಿಗ್‍ಬಾಸ್ ಮನೆ ಮಾತ್ರವಲ್ಲದೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಹಾಗೂ ಕಂಠೀರವ ಸ್ಟುಡಿಯೋದಲ್ಲೂ ಕೋವಿಡ್ ಕೇಂದ್ರವನ್ನು ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಚಿತ್ರಕರ್ಮಿಗಳಿಗಾಗಿ ಕೋವಿಡ್ ಕೇಂದ್ರವನ್ನು ಪ್ರಾರಂಬಿಸುವ ಬಗ್ಗೆ.@CMofKarnataka@BSYBJP@mla_sudhakar @VSOMANNA_BJP @RAshokaBJP @bcpatilkourava @drashwathcn pic.twitter.com/GmiVTmGsk9
— BAMA HARISH (@BamaHarish) May 11, 2021
ಪತ್ರದಲ್ಲೇನಿದೆ..?
ಕನ್ನಡ ಚಲನಚಿತ್ರ ಕಲಾವಿದರ ಸಂಘ, ಬಿಗ್ ಬಾಸ್ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರವನ್ನು ತೆರೆದು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಚಿಕಿತ್ಸೆಯ ನೆರವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಕುಮಾರ್ ಹಾಗೂ ಉಪೇಂದ್ರ ಮುಂದಾಗಿದ್ದಾರೆ.