ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ಅಸಂಘಟಿತ ಕಾರ್ಮಿಕರು, ಕುಲ ಕಸಬು ಮಾಡುವ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವಂತೆ ತಿಳಿಸಿದ್ದೇನೆ. ಆದರೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರವು ಸವಿತಾ ಸಮಾಜ, ನೇಕಾರರು, ಮಡಿವಾಳ ಸಮಾಜದ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವ ಭರವಸೆ ನೀಡಿದೆ. ಆದರೆ ಈವರೆಗೂ ಯಾರಿಗೂ ಹಣ ಪಾವತಿಯಾಗಿಲ್ಲ. ರೈತರು, ಹಣ್ಣು, ತರಕಾರಿ, ಹೂ ಬೆಳೆಗಾರರಿಗೆ ನೀಡಿದ ಸಹಾಯಧನದ ಭರವಸೆ ಹಾಗೆ ಉಳಿದಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣದಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇತ್ತ ಬಡವ ಕಷ್ಟಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇಲೆ ನನಗೆ ಯಾವುದೇ ನಂಬಿಕೆ, ವಿಶ್ವಾಸ ಉಳಿದಿಲ್ಲ ಎಂದರು.