ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದನ್ನು ಖಂಡಿಸಿ ಜಿಲ್ಲೆಯ ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ದ ಧಿಕ್ಕಾರ ಕೂಗಿದರು. ಟೈರ್ ಗೆ ಬೆಂಕಿ ಹಾಕಿ ಸಿ.ಪಿ.ಯೋಗೀಶ್ವರ್ ಹಾಗೂ ಯತ್ನಾಳ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರ ಶ್ರಮ ಹಾಗೂ ಹೋರಾಟ ಬಹಳ ಮುಖ್ಯವಾಗಿದೆ. ಯಡಿಯೂರಪ್ಪ ಇಲ್ಲದಿದ್ದರೇ ರಾಜ್ಯದಲ್ಲಿ ಬಿಜೆಪಿ ಇದೆಯಾ ಎಂಬ ಪರಿಸ್ಥಿತಿ ಇರುತಿತ್ತು. ಆದರೆ ಯಡಿಯೂರಪ್ಪ ಅವರ ಸಂಘಟನೆಯಿಂದಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ ಎಂದರು.
Advertisement
Advertisement
ತಾವೇ ಸ್ವತಃ ಶಾಸಕರಾಗಿ ಗೆಲ್ಲಲ್ಲು ಸಾಧ್ಯವಿಲ್ಲದ ವ್ಯಕ್ತಿಗಳ ಮಾತಿಗೆ ಮನ್ನಣೆ ನೀಡಿದ ಹೈಕಮಾಂಡ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ. ತಾಕತ್ ಇದ್ದರೆ ಮುಂದೆ ಮುಖ್ಯಮಂತ್ರಿ ಆಗುವವರು 10 ಸ್ಥಾನ ಗೆದ್ದು ತೋರಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಸವಾಲ್ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಶಾಶ್ವತವಾಗಿ ಇರಬೇಕು ಎನ್ನುವುದಾದರೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಆಗಿ ಮುಂದುವರಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
Advertisement
Advertisement
ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ಹೋರಾಟ ಶ್ರಮದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆಯೇ ಹೊರತು ಹೈಕಮಾಂಡ್ ನಿಂದ ಅಲ್ಲ. ಇದನ್ನೂ ಓದಿ: ಕೇಂದ್ರ ಸಚಿವರಾಗುವಂತೆ ವಾಜಪೇಯಿ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ
ಹೈಕಮಾಂಡ್ ಕೆಲವು ಕಿಡಿಗೇಡಿಗಳ ಮಾತು ಕೇಳಿ ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತೆ ಮಾಡಿದೆ. ಯಡಿಯೂರಪ್ಪ ಅವರು ಕಣ್ಣೀರು ಹಾಕಿ ರಾಜೀನಾಮೆ ಕೊಡುವಂತೆ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ ಹೈಕಮಾಂಡ್ ಇನ್ನಾದರೂ ಎಚ್ಚೆತ್ತುಕೊಂಡು ಉಳಿದ ಅವಧಿಗೆ ಅವರನ್ನೇ ಮುಖ್ಯಮಂತ್ರಿ ಆಗಿ ಮುಂದುವರಿಸಬೇಕು. ಇಲ್ಲದಿದ್ದರೆ ಅವರ ಕಣ್ಣೀರ ಶಾಪ ತಟ್ಟಿ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೆಹಲಿಯಿಂದ ಒತ್ತಡ ಇಲ್ಲ, ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ: ಬಿಎಸ್‍ವೈ
ಯಡಿಯೂರಪ್ಪ ಅವರ ಆಡಳಿತದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕು ಸೇರಿದಂತೆ ಇಡೀ ರಾಜ್ಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ರಾಜ್ಯದಲ್ಲಿ ಬಿಜೆಪಿ ಶಾಶ್ವತವಾಗಿ ಇರಬೇಕು ಎಂದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಸಹ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಧ್ಯಾಹ್ನ ತಮ್ಮ ಸ್ಥಾನಕ್ಕೆ ಬಿಎಸ್‍ವೈ ರಾಜೀನಾಮೆ ನೀಡಿದ ತಕ್ಷಣವೇ ವರ್ತಕರು ಅಂಗಡಿ ಮುಗ್ಗಟ್ಟನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.