ವಿಜಯಪುರ: ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಯಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುವ ಸಾಧ್ಯತೆ ಕಂಡು ಬರುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಲ್ಲಿ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ದೂರಾಗುತ್ತಾರೆ ಎಂದು ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಚನಶಿಲಾ ಮಂಟಪ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು 40-50 ವರ್ಷಗಳವರೆಗೆ ಅಲೆದಾಡಿ ಪಕ್ಷ ಸಂಘಟಿಸುವ ಜೊತೆಗೆ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಇದೀಗ ಅವರನ್ನು ನಡೆಸಿಕೊಳ್ಳುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಈ ಹಿಂದೆ ವಿರೇಂದ್ರ ಪಾಟೀಲರು 185ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿ ಮುಖ್ಯಮಂತ್ರಿಯಾದ ನಂತರ ಕೇಂದ್ರದವರು ಸರಿಯಾಗಿ ನಡೆಸಿಕೊಳ್ಳದ ಕಾರಣದಿಂದ ಲಿಂಗಾಯತರು ಹಾಗೂ ಲಿಂಗಾಯತ ಬೆಂಬಲಿತ ಸಮಾಜದವರು ಕಾಂಗ್ರೆಸ್ ಪಕ್ಷದಿಂದ ದೂರಾದರು ಎಂದರು.
Advertisement
Advertisement
ಹಿರಿಯ ಹಾಗೂ ಪ್ರಾಮಾಣಿಕ ವ್ಯಕ್ತಿಯಾದ ಎಸ್.ಆರ್.ಪಾಟೀಲರಿಗೆ ಕಾರಣವಿಲ್ಲದೆ ಸಚಿವ ಸ್ಥಾನದಿಂದ ಕಾಂಗ್ರೆಸ್ ತೆಗೆದು ಹಾಕಿದೆ. ಯಡಿಯೂರಪ್ಪನವರು ಲಿಂಗಾಯತ ಸರ್ವ ಸಮಾಜದ ಪ್ರಶ್ನಾತೀತ ಪ್ರಭಾವಿ ನಾಯಕರಾಗಿದ್ದು, ಕೇಂದ್ರದವರು ಇಲ್ಲವೆ ಶಾಸಕರು ರಾಜೀನಾಮೆ ಪಡೆಯುವ ಕಾರ್ಯಕ್ಕೆ ಮುಂದಾಗಬಾರದು. ಇಲ್ಲದಿದ್ದರೆ ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುತ್ತಾರೆ ಎನ್ನುವುದನ್ನು ಅರಿತುಕೊಳ್ಳಬೇಕೆಂದು ಹೇಳಿದರು.
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಮುಖ್ಯಮಂತ್ರಿ ಪದವಿ ದೂರದ ಮಾತಾಗಿದ್ದು, ಮಂತ್ರಿ ಪದವಿಗೆ ತೃಪ್ತರಾಗಬೇಕಿದೆ. ಜೆಡಿಎಸ್‍ನಲ್ಲಿ ಮುಖ್ಯಮಂತ್ರಿ ಪದವಿ ಒಕ್ಕಲಿಗರಿಗೆ ಫಿಕ್ಸ್ ಆಗಿದೆ. ಯಡಿಯೂರಪ್ಪನವರು ರಾಜ್ಯದಲ್ಲಿ 25 ಸಂಸದರನ್ನು ಗೆಲ್ಲಿಸುವ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕೊಡುಗೆ ನೀಡಿದ್ದಾರೆ. ಕೇಂದ್ರದವರು ಇದನ್ನು ಅರಿತುಕೊಳ್ಳಬೇಕು. ಈ ಹಿಂದೆ ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದಾಗ ಸದಾನಂದಗೌಡರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ವ್ಯತಿರಿಕ್ತವಾಗಿ ಹೇಳಿಕೆ ನೀಡುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದರು. ಪಕ್ಷಕ್ಕೆ ಹಾನಿಯಾಗದಂತೆ ನಿಗಾವಹಿಸುತ್ತಿದ್ದರು ಎಂದರು.
ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಮುಂದಿನ ಬಾರಿಯೂ ಯಡಿಯೂರಪ್ಪನವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಮುಂದಿನ ಅವಧಿಯಲ್ಲಿ ನೇತೃತ್ವ ತೆಗೆದುಕೊಂಡವರು ಮುಖ್ಯಮಂತ್ರಿ ಆಗಬಹುದು ಎಂದು ಶ್ರೀಗಳು ಹೇಳಿದರು.
ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎನ್ನುವ ಕಾರಣ ಮುಂದೆ ಮಾಡಲಾಗುತ್ತಿದೆ. ಅವರಲ್ಲಿನ ಸಕಾರಾತ್ಮಕ ಕಾರ್ಯಗಳನ್ನು ಲೆಕ್ಕಕ್ಕಿಲ್ಲ ಇಲ್ಲದಂತೆ ಮಾಡಲಾಗುತ್ತಿದೆ. ಇದರಿಂದ ಬಿಜೆಪಿ ಹಾಗೂ ರಾಜ್ಯಕ್ಕೆ ಲಾಭವಾಗುತ್ತದೆ. ಬಿ.ವೈ ವಿಜಯೇಂದ್ರ ಹಾಗೂ ಬಿ.ವೈ ರಾಘವೇಂದ್ರ ಕೂಡ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಬಿಜೆಪಿ ಎಲ್ಲ ನಾಯಕರೂ ಒಂದು ಕುಟುಂಬದಂತೆ ಯೋಚಿಸಿ ಮುಂದಾಗಬೇಕು. ಚುನಾವಣೆಯಲ್ಲಿ ಕೇವಲ 20ರಷ್ಟು ಕೇಂದ್ರದ ಪ್ರಭಾವ ಬೀರುತ್ತದೆ. ಆದರೆ ಯಡಿಯೂರಪ್ಪನವರಿಗೆ ಎಲ್ಲರನ್ನು ಒಗ್ಗೂಡಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯವಿದೆ. ಕೆಲವರು ತಾವೇ ಪ್ರಭಾವಿ ಎಂದು ಕೊಂಡಿದ್ದಾರೆ. ಆದರೆ ಸ್ವಂತ ಶಕ್ತಿ ಮೇಲೆ ಗೆದ್ದು ಬರುವ ಸಾಮರ್ಥ್ಯವಿಲ್ಲದಿರುವುದು ವಾಸ್ತವಿಕ ಸಂಗತಿಯಾಗಿದೆ. ಮಂತ್ರಿ ಆಗದ ಶಾಸಕರು ಪಕ್ಷ ಹಾಗೂ ರಾಜ್ಯಕ್ಕೆ ತ್ಯಾಗ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಂಬೈ, ಕಲ್ಯಾಣ ಹಾಗೂ ಉತ್ತರ ಕರ್ನಾಟಕ, ಮೈಸೂರು ಭಾಗದ ಜನತೆ ಸಾಥ್ ನೀಡಿದ್ದಾರೆ. ಯಡಿಯೂರಪ್ಪನವರು ಲಿಂಗಾಯತ ಸಮುದಾಯಕ್ಕೆ ಹೇಳದೇ ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿಯಬಾರದು. ಅಲ್ಲದೇ ಮುಖ್ಯಮಂತ್ರಿಗಳು ಎಲ್ಲ ಸಮುದಾಯದ ಜನತೆಯೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ನಗುನಗುತ್ತಾ ಮಾತನಾಡಿ ಸ್ಪಂದಿಸಬೇಕು. ಲಿಂಗಾಯತ ಸಮುದಾಯದ ಭವಿಷ್ಯಕ್ಕಾಗಿ ನಾಯಕರು ಯಡಿಯೂರಪ್ಪನವರಿಗೆ ಸಹಕರಿಸಬೇಕು. ಯಡಿಯೂರಪ್ಪನವರು ಇಲ್ಲದ ಬಿಜೆಪಿ ಸಂಘಟನೆ ಕಷ್ಟಕರವಾಗಿದೆ. ಬಿಜೆಪಿ ನಾಯಕರು ಅವರಿಗೆ ಸಹಕಾರ ನೀಡಿ ನಾಡಿನ ಒಳತಿಗೆ ಸ್ಪಂದಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಸ್ವಾಮೀಜಿಗಳು ದಕ್ಷಿಣೆಗಾಗಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದು ಸರಿಯಲ್ಲ. ಬಹುತೇಕ ಮಠಾಧೀಶರು ನಯಾ ಪೈಸೆ ಅನುದಾನ ತೆಗೆದುಕೊಳ್ಳದೆ ಲಿಂಗಾಯತ ಸೇರಿ ಸರ್ವ ಸಮಾಜಕ್ಕೆ ಹಾಗೂ ನಾಡಿನ ಶ್ರೇಯೋಭಿವೃದ್ಧಿಗೆ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದುವರಿಯಬೇಕು ಎನ್ನುತ್ತಿರುವುದನ್ನು ಅರಿತುಕೊಳ್ಳಬೇಕೆಂದು ಹೇಳಿದರು. ಇದನ್ನೂ ಓದಿ:ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಮಳೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ: ಹೆಬ್ಬಾರ್