– ಸ್ವಾರ್ಥಕ್ಕಾಗಿ ರಾಜಕೀಯ ಪ್ರೇರಿತ ಮೀಸಲಾತಿ
ಹಾಸನ: ಸರ್ಕಾರ ನಿಯಮ ಮೀರಿ ಹಾಸನ ಜಿಲ್ಲೆಯ, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಮೀಸಲಾತಿ ಪ್ರಕಟಿಸಿದೆ. ಸರ್ಕಾರದಲ್ಲಿ ಕಾಣದ ಕೈಗಳು ಹಿಂಬದಿಯಿಂದ ಯಡಿಯೂರಪ್ಪ ಅವರ ಕೈಯಲ್ಲಿ ಈ ರೀತಿ ಆಡಳಿತ ನಡೆಸುತ್ತಿವೆ ಎಂದು ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಅರಸೀಕೆರೆ ನಗರಸಭೆಯ ಅಧ್ಯಕ್ಷಗಾದಿ ಎಸ್‍ಟಿ ಅಭ್ಯರ್ಥಿ ಮೀಸಲಾಗಿದೆ. ಆದರೆ ಎಸ್‍ಟಿ ಪಂಗಡಕ್ಕೆ ಸೇರಿದ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಮಾತ್ರ ಜಯಗಳಿಸಿದ್ದಾರೆ. ಹೀಗಾಗಿ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದರೂ ಅಧ್ಯಕ್ಷಗಾದಿ ಮಾತ್ರ ಬಿಜೆಪಿ ಪಾಲಾಗುತ್ತಿದೆ. ಈ ಬಗ್ಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿರುವ ಶಾಸಕ ಶಿವಲಿಂಗೇಗೌಡ, ಯಡಿಯೂರಪ್ಪ ಅವರಿಗೆ ನೇರವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಯಡಿಯೂರಪ್ಪ ಏನು ಬಹುಮತ ಇಲ್ಲದೆ ಮುಖ್ಯಮಂತ್ರಿ ಆದನಾ? ನಗರಸಭೆ ಮೀಸಲಾತಿ ಪ್ರಕಟ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ – ರೇವಣ್ಣ ಕಿಡಿ
ನ್ಯಾಯಾಧೀಶರು ನಮಗೆ ನ್ಯಾಯ ಕೊಡಬೇಕು. ರಾಜಕೀಯ ಸ್ವಾರ್ಥಕ್ಕಾಗಿ, ರಾಜಕೀಯ ಪ್ರೇರಿತ ಮೀಸಲಾತಿ ಮಾಡಿದ್ದಾರೆ. ಕಾರ್ಯಾಂಗ, ಶಾಸಕಾಂಗ ನಡೆಸುವವರಿಗೆ ಕ್ಯಾಕರಿಸಿ, ಕ್ಯಾಕರಿಸಿ ಉಗಿಯಬೇಕಾಗುತ್ತೆ. ಇದಕ್ಕೆ ಪ್ರಜಾಪ್ರಭುತ್ವ ಅಂತಾ ಕರೆಯಬೇಕಾ. ಈ ಬಗ್ಗೆ ಸುಪ್ರೀಂಕೋರ್ಟ್‍ಗೆ ಹೋದರೂ ಬಿಡೋದಿಲ್ಲ. ಹೋರಾಟ ಮಾಡುತ್ತೇನೆ. ಯಾವ ಪುರುಷಾರ್ಥಕ್ಕಾಗಿ ಇಂಥ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಕಾಣದ ಕೈ ಕೆಲಸ ಮಾಡುತ್ತಿವೆ. ಯಡಿಯೂರಪ್ಪ ಹೇಗೆ ಇದನ್ನ ಸಮರ್ಥಿಸಿ ಕೊಳ್ಳುತ್ತಾರೆ? ಕಾರ್ಯಾಂಗ, ಶಾಸಕಾಂಗ ಎರಡೂ ನ್ಯಾಯಾಂಗಕ್ಕೆ ಮೋಸ, ಅಪಚಾರ ಮಾಡುತ್ತಿವೆ ಎಂದು ಕಿಡಿಕಾರಿದರು.
ಅರಸೀಕೆರೆ ನಗರಸಭೆ ಒಟ್ಟು 31 ಸದಸ್ಯ ಬಲ ಹೊಂದಿದೆ. ಅದರಲ್ಲಿ ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, 3 ಜನ ಸ್ವತಂತ್ರ ಅಭ್ಯರ್ಥಿಗಳು ಸದಸ್ಯರಾಗಿದ್ದಾರೆ. ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಎಸ್‍ಟಿ ಗೆ ಮೀಸಲಾಗಿರುವ ಕಾರಣ, ಕೇವಲ 5 ಜನ ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷದ ಸದಸ್ಯ ನಗರಸಭೆ ಅಧ್ಯಕ್ಷರಾಗೋದು ಖಚಿತವಾಗಿದೆ. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ