ಬಿಎಲ್‍ಡಿಇ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ದರ: ಎಂ.ಬಿ.ಪಾಟೀಲ್

Public TV
2 Min Read
bij mp patil

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಬಿಎಲ್‍ಡಿಇ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದರವನ್ನು ಕಡಿಮೆ ಮಾಡಲಾಗಿದೆ ಎಂದು ಮಾಜಿ ಸಚಿವರೂ ಆಗಿರುವ ಆಸ್ಪತ್ರೆ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.

bij bmld hospital 5

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಲ್‍ಡಿಇ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಕಡಿಮೆ ದರ ನಿಗದಿ ಮಾಡಿದ್ದೇನೆ. ಜನರ ಸೇವೆಗಾಗಿ ಬಿಎಲ್‍ಡಿಇ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಬಡ ಜನರ ಚಿಕಿತ್ಸೆಗೆ ತೊಂದರೆಯಾಗದಿರಲಿ ಎಂದು ವೆಚ್ಚ ಕಡಿಮೆ ಮಾಡಲಾಗಿದೆ. ನಿನ್ನೆ ಸಂಸ್ಥೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, 250 ಬೆಡ್ ಗಳ ವ್ಯವಸ್ಥೆಯನ್ನು 500 ಬೆಡ್ ಗಳಿಗೆ ಏರಿಸಲಾಗಿದೆ. ಇದರಲ್ಲಿ 300 ಆಕ್ಸಿಜನ್ ಬೆಡ್ ಗಳಿವೆ, 200 ಬೆಡ್ ಗಳನ್ನು ಐಸೋಲೆಷನ್ ಗೆ ಬಳಸಲಾಗುತ್ತಿದೆ ಎಂದು ವಿವರಿಸಿದರು.

bij bmld hospital 2

ಸರ್ಕಾರ ಒಂದು ವಾರ್ಡ್ ಗೆ 10 ಸಾವಿರ ರೂ. ನಿಗದಿ ಮಾಡಿದೆ, ನಾವು ಇದನ್ನು 3 ಸಾವಿರಕ್ಕೆ ಇಳಿಸಿದ್ದೇವೆ. ಆಕ್ಸಿಜನ್ ಬೆಡ್ ಗೆ 12 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಮಾಡಿದೆ, ನಾವು 5 ಸಾವಿರ ರೂ.ಗೆ ಇಳಿಸಿದ್ದೇವೆ. ಐಸಿಯುಗೆ ಸರ್ಕಾರ 25 ಸಾವಿರ ರೂ. ನಿಗದಿ ಮಾಡಿದೆ, ನಾವು ಕೇವಲ 8 ಸಾವಿರ ರೂ.ಗೆ ಕಡಿಮೆ ಮಾಡಿದ್ದೇವೆ. ಕೆಲವು ರೋಗಿಗಳು ಇದೂ ಕೂಡ ಅಧಿಕವಾಗಿದೆ ಎನ್ನುತ್ತಿದ್ದಾರೆ. ಕೆಲವರಿಗೆ ಬಿಲ್ ಕಟ್ಟಲು ಆಗದ ಪರಿಸ್ಥಿತಿ ಇದೆ. ಸರ್ಕಾರದ ದರದ ಪ್ರಕಾರವೇ ಚಿಕಿತ್ಸೆ ನೀಡಿದರೆ ಮೂರು, ನಾಲ್ಕು ಲಕ್ಷ ರೂ. ಬಿಲ್ ಬರುತ್ತೆ. ಇದನ್ನು ನೋಡಿಕೊಂಡು ಈ ನಿರ್ಧಾರ ಮಾಡಲಾಗಿದೆ ಎಂದರು.

bij bmld hospital 4

ರೋಗಿಗಳಿಗಾಗಿ ಚಿಕಿತ್ಸೆ ದರ ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಬಿ.ಎಂ.ಪಾಟೀಲರು ಕಟ್ಟಿದ ಸಂಸ್ಥೆ ಇದು. ಜಿಲ್ಲೆಯ ಜನರ ಸೇವೆ ಮಾಡಲು ಈ ಆಸ್ಪತ್ರೆ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಹಣ ಮಾಡುವುದು ಸರಿಯಲ್ಲ, ನಾವು ಜನರ ನೆರವಿಗೆ ಬರಬೇಕು. ಮಾನವೀಯತೆ ಉದ್ದೇಶದಿಂದ ಈ ಕೆಲಸ ಮಾಡಿದ್ದೇವೆ ಎಂದರು.

bij bmld hospital 3

ಜಿಂದಾಲ್ ನಲ್ಲಿ ತಯಾರಾಗುವ ಆಕ್ಸಿಜನ್‍ನ ಶೇ.50ರಷ್ಟು ಮಹಾರಾಷ್ಟ್ರಕ್ಕೆ ಪುರೈಕೆ ಮಾಡುವ ವಿಚಾರ ನನ್ನ ಕಿವಿಗೆ ಬಿದ್ದಿದೆ. ಮೊದಲು ನಮ್ಮ ರಾಜ್ಯದ ಜನತೆಯ ಅವಶ್ಯಕತೆ ಪೂರ್ಣಗೊಳಿಸಿ. ಹೆಚ್ಚುವರಿ ಆಕ್ಸಿಜನ್‍ನ್ನು ಮಹಾರಾಷ್ಟ್ರಕ್ಕೆ ನೀಡಿ. ಮೊದಲು ನಮ್ಮ ಕೊರತೆ ನೀಗಿಸಿ. ನಮಗೇ ಕೊರತೆ ಇದ್ದಾಗ ಬೇರೆಯವರಿಗೆ ಕೊಡುವುದು ಎಷ್ಟು ಸೂಕ್ತ? ಮಹಾರಾಷ್ಟ್ರಕ್ಕೆ ಕೊಡಬಾರದು ಎಂದು ಹೇಳಿಲ್ಲ. ಅವರೂ ನಮ್ಮ ಸಹೋದರರೇ, ಆದರೆ ನಮ್ಮ ರಾಜ್ಯದ ಬೇಡಿಕೆ ಮೊದಲು ಪೂರೈಸಲಿ. ಆರೋಗ್ಯ ಸಚಿವರಿಗೂ ಈ ವಿಚಾರದ ಕುರಿತು ಗಮನಕ್ಕೆ ತರುವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *