ಬೆಂಗಳೂರು: ಶಿರಾ ಬೈ ಎಲೆಕ್ಷನ್ ವೇಳೆ ಮುನಿಸಿಕೊಂಡಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನಲ್ಲಿ ಒಂದಾಗಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಿರುವಾಗ ಬಾ ಗುರು ಮಾತನಾಡೋಣ, ಬಾ ಬ್ರದರ್ ಎಂದು ಪ್ರಜ್ವಲ್ ರೇವಣ್ಣ ಅವರನ್ನ ಕರೆದರು. ನಿಖಿಲ್ ವೇದಿಕೆ ಮೇಲೆ ಬಾ ಬ್ರದರ್ ಎಂದು ಕರೆಯುತ್ತಿದ್ದಂತೆ ಕಾರ್ಯಕರ್ತರೆಲ್ಲರೂ ಜೋರಾಗಿ ಕೂಗಿ ಶಿಳ್ಳೆ ಹಾಕಿದರು. ಉಪಚುನಾವಣೆ ವೇಳೆ ಶಿರಾದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೆ ದೂರದಲ್ಲಿ ಇಬ್ಬರು ಕುಳಿತುಕೊಳ್ಳುತ್ತಿದ್ದರು. ಇಂದು ನಡೆದ ಸಭೆಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತ ಸೋದರರು ಮಾತಿನಲ್ಲಿ ತೊಡಗಿದ್ದರು.
ವೇದಿಕೆ ಮೇಲೆ ಅನೇಕ ಜನರಿದ್ದೀರಿ ಎಲ್ಲರ ಹೆಸರನ್ನು ಹೇಳೊದಿಕ್ಕೆ ಸಮಯ ಇಲ್ಲ. ನನ್ನ ಸಹೋದರ ಪ್ರಜ್ವಲ್ ರೇವಣ್ಣ ಅವರು ಭಾಗಿಯಾಗಿದ್ದಾರೆ. ಬಿಹಾರದಲ್ಲಿ 32 ವರ್ಷದ ಯುವಕ ತೇಜಸ್ವಿ ಯಾದವ್ ಜನರ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದಾರೆ. ಪಕ್ಷದಲ್ಲಿ ನಾನಿದ್ದೇನೆ, ಪ್ರಜ್ವಲ್ ರೇವಣ್ಣ ಅವರಿದ್ದೇವೆ. ನಮ್ಮಂತಹ ಸಾಕಷ್ಟು ಮಂದಿ ಯುವಕರಿದ್ದಾರೆ. ಯುವ ಘಟಕದ ಸ್ಥಾನದಲ್ಲಿ ಬೇರೊಬ್ಬರು ಯಾರಾದ್ರು ಬರಲಿ ಎಂದು ನಿಮಗೆ ಅನಿಸಿದ್ರೆ ಮುಕ್ತವಾಗಿ ಹೇಳಿ. ನಾನು ಅಧಿಕಾರಕ್ಕಾಗಿ ಅಂಟಿಕೂತಿಲ್ಲ. ಮದುವೆ, ಮತ್ತು ಇತರೆ ಕಾರಣದಿಂದ ಪಕ್ಷದಲ್ಲಿ ಸಕ್ರಿಯವಾಗಲು ಆಗಲಿಲ್ಲ. ಆದರೆ ಮುಂದೆ ಪಕ್ಷ ಸಂಘಟನೆಗಾಗಿ ಉತ್ತರ ಕರ್ನಾಟಕ ದಲ್ಲಿ ಪ್ರವಾಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಶಿರಾದಲ್ಲಿ ಗೊಂದಲ ಉಂಟಾಗಿತ್ತು. ಅಲ್ಪ ಸಮಯದಲ್ಲೇ ಭಾಷಣ ಮುಗಿಸಬೇಕು ಅಂತ ಹೇಳಿದ್ದರಿಂದ ಹಾಗಾಗಿ ಪ್ರಜ್ವಲ್ ಹೆಸರು ಹೇಳಲಾಗಲಿಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಿಗೆ ಹೋಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.