– ಸದ್ದಿಲ್ಲದೆ 80ಕ್ಕೂ ಅಧಿಕ ವಿವಾಹಗಳು ನಡೆದಿರುವ ಶಂಕೆ
ಚಾಮರಾಜನಗರ: ಎಷ್ಟೇ ಅರಿವು ಮೂಡಿಸಿದರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಲ್ಲುತ್ತಿಲ್ಲ. ಪೋಷಕರು ಕದ್ದುಮುಚ್ಚಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೇ ಹೆಚ್ಚಿನ ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅನಕ್ಷರತೆ, ಅರಿವಿನ ಕೊರತೆ, ಮಕ್ಕಳು ದಾರಿ ತಪ್ಪುವ ಭಯದಿಂದಾಗಿ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ 2019ರ ಏಪ್ರಿಲ್ ನಿಂದ 2020ರ ಮಾರ್ಚ್ ವರೆಗಿನ ಅವಧಿಯಲ್ಲಿ 22 ಬಾಲ್ಯ ವಿವಾಹ ತಡೆಗಟ್ಟಲಾಗಿತ್ತು. ಆದರೆ ಈ ವರ್ಷ ಕೇವಲ ಐದು ತಿಂಗಳ ಅವಧಿಯಲ್ಲಿ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಲಾಕ್‍ಡೌನ್ ಸಂದರ್ಭವನ್ನೇ ಬಳಸಿಕೊಂಡು ಕೆಲ ಪೋಷಕರು ತಮ್ಮ ಮಕ್ಕಳಿಗೆ ಕದ್ದುಮುಚ್ಚಿ ಬಾಲ್ಯ ವಿವಾಹ ಮಾಡಲು ಮುಂದಾಗಿರುವುದು ಕಂಡು ಬಂದಿದೆ.
ಕಳೆದ ಸಾಲಿನಲ್ಲಿ ಮೂರು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಾಲಿನಲ್ಲಿ ಈ ವರೆಗೆ ಒಂದು ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಬೆಳಕಿಗೆ ಬಾರದೆ 80ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆದು ಹೋಗಿರುವ ಶಂಕೆ ಇದೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಪ್ರಾಪ್ತ ವಯಸ್ಸಿಗೆ ಹೆಣ್ಣು ಮಕ್ಕಳು ಗರ್ಭಿಣಿಯಾಗುವುದರಿಂದ ಹುಟ್ಟುವ ಮಗು ಸಹ ಆನಾರೋಗ್ಯಕ್ಕೀಡಾಗುವ ಹಾಗೂ ತಾಯಿ ನಾನಾ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಷ್ಟೇ ಅರಿವು ಮೂಡಿಸಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲಲ್ಲ.
ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿವೆ. ಆದರೆ ಇದ್ಯಾವುದನ್ನೂ ಜನ ಕೇಳುತ್ತಿಲ್ಲ. ಹಿಂದುಳಿದ ಸಮುದಾಯಗಳಲ್ಲಿ ಹೆಚ್ಚಿನ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬರುತ್ತಿದೆ.