ಬೆಂಗಳೂರು: ಸುಶಾಂತ್ ಸಿಂಗ್ ಪ್ರಕರಣದಲ್ಲಿ ಡ್ರಗ್ಸ್ ಮೂಲ ಕೆದಕುತ್ತಿರುವ ಎನ್‍ಸಿಬಿ ಬೀಸಿದ ಬಲೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀಪುರಂ ಕಾರ್ಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್ ಸಿಲುಕುವ ಎಲ್ಲಾ ಸಾಧ್ಯತೆಗಳು ಇವೆ.
ನಟ ಸುಶಾಂತ್ ಗೆಳತಿ, ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಶಂಕೆ ಮೇಲೆ ಯಶಸ್‍ಗೆ ನೋಟಿಸ್ ಜಾರಿ ಮಾಡಲಾಗಿದೆ. ಮೂರು ದಿನಗಳ ಹಿಂದೆಯೇ ಕಾಂಗ್ರೆಸ್ ಪಾಲಿಕೆ ಸದಸ್ಯ ಕೇಶವಮೂರ್ತಿಯ ರಾಜಾಜಿನಗರದ ನಿವಾಸದ ಮೇಲೆ ಎನ್‍ಸಿಬಿ ದಾಳಿ ಮಾಡಿತ್ತು. ಈ ವೇಳೆ ಯಶಸ್ ಮನೆಯಲ್ಲಿ ಇರದ ಕಾರಣ, ನೊಟೀಸ್ ಜಾರಿ ಮಾಡಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಎನ್‍ಸಿಬಿ ಸೂಚಿಸಿದೆ.
Advertisement
Advertisement
ಸದ್ಯ ಯಶಸ್ ಮುಂಬೈನಲ್ಲೇ ಇದ್ದು ನಾಳೆ ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾನೆ ಎಂದು ಅವರ ತಂದೆ ಕೇಶವಮೂರ್ತಿ ತಿಳಿಸಿದ್ದಾರೆ. ಇನ್ನು ನನ್ನ ಮಗನಿಗೆ ಮುಂಬೈ ನಂಟು ಇಲ್ಲ. ಎರಡು ಬಾರಿ ಗೋವಾಗೆ ಹೋಗಿರಬಹುದು ಅಷ್ಟೇ. ಯಾರದ್ದೋ ಮೊಬೈಲ್‍ನಲ್ಲಿ ನನ್ನ ಮಗನ ನಂಬರ್ ಇದ್ದಿದ್ದಕ್ಕೆ ಎನ್‍ಸಿಬಿ ನೋಟಿಸ್ ನೀಡಿದೆ. ನನ್ನ ಮಗ ಅಂಥವನಲ್ಲ ಎಂದು ಕೇಶವಮೂರ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ.
Advertisement
Advertisement
ಯಾರು ಈ ಯಶಸ್?
26 ವರ್ಷ ವರ್ಷದ ಯಶಸ್ ಕಾಂಗ್ರೆಸ್ ಕಾರ್ಪೋರೇಟರ್ ಕೇಶವಮೂರ್ತಿಯ ಏಕೈಕ ಪುತ್ರ. ಬಿಎ ಪದವಿಯನ್ನು ಅರ್ಧಕ್ಕೆ ಓದಿ ನಿಲ್ಲಿಸಿರುವ ಈತ ಜಿಮ್ ಕಡೆ ಹೆಚ್ಚು ಗಮನ ನೀಡುತ್ತಿದ್ದಾನೆ. ಮಾಜಿ ಶಾಸಕ ರೋಷನ್ ಬೇಗ್ ಪುತ್ರನೊಂದಿಗೆ ಸಂಪರ್ಕ ಹೊಂದಿರುವ ಈತ ಹೈಫೈ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ.
ಚಿತ್ರರಂಗದ ನಟನಟಿಯರೊಂದಿಗೆ ಸಂಪರ್ಕ ಹೊಂದಿದ್ದ ಯಶಸ್ ತಂದೆ ಕೇಶವಮೂರ್ತಿ ಮಾತುಗಳನ್ನ ಕೇಳುತ್ತಿರಲಿಲ್ಲ. ದುಡ್ಡಿಗಾಗಿ ಈ ಹಿಂದೆ ಮನೆಯಲ್ಲೇ ಗಲಾಟೆ ಮಾಡಿಕೊಂಡಿದ್ದ. ಗೋವಾ, ಮುಂಬೈನಲ್ಲಿ ಹೈ ಎಂಡ್ ಪಾರ್ಟಿ ಆಯೋಜನೆ ಮಾಡುತ್ತಿದ್ದ.
ಎನ್‍ಸಿಬಿ ಅರೆಸ್ಟ್ ಮಾಡಿರುವ ಮಹಮ್ಮದ್ ರೆಹಮಾನ್ ಜೊತೆ ಯಶಸ್ ಉತ್ತಮ ನಂಟು ಹೊಂದಿದ್ದ. ರೆಹಮಾನ್ ಮೊಬೈಲ್‍ನಲ್ಲಿ ಯಶಸ್ ನಂಬರ್ ಇದ್ದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಮಹಮ್ಮದ್ ರೆಹಮಾನ್ ವಿರುದ್ಧ ರಿಯಾಗೆ ಡ್ರಗ್ಸ್ ಪೂರೈಕೆ ಮಾಡಿದ ಆರೋಪವಿದೆ.