ಬೆಂಗಳೂರು: ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಯನ್ನು ಬಳಸಿಕೊಂಡು ವಾಮಾಚಾರ ಮಾಡಿರುವ ಘಟನೆ, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಕೊರೊನಾ ಲಾಕ್‍ಡೌನ್ ನಡುವೆ ಮಂತ್ರವಾದಿಗಳ ಕುತಂತ್ರ ಬೆಳಕಿಗೆ ಬಂದಿದೆ. ಕೆಲವು ಸ್ಥಳೀಯರು ಸೇರಿದಂತೆ ಮಾಂತ್ರಿಕನ ನೆರವಿನಿಂದ ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಗೆ ವಿಚಿತ್ರವಾದ ಪೂಜೆ ಮಾಡಿ ವಾಮಾಚಾರ ಮಾಡಿ ನರಬಲಿ ಮಾಡಲು ಸಿದ್ಧತೆ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಮಂತ್ರವಾದಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮಗಳು ನೇಣಿಗೆ ಶರಣು – ಹೃದಯಾಘಾತದಿಂದ ತಂದೆ ಸಾವು
ಸ್ಥಳೀಯ ಕೆಲವು ಕುತಂತ್ರಿಗಳು ಪ್ರಾಯಕ್ಕೆ ಬರುವ ಹೆಣ್ಣು ಮಗುವಿಗೆ ಪೂಜೆ ಮಾಡಿ ನರಬಲಿಗೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಬಾಲಕಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಇನ್ನಿತರ ವಸ್ತುಗಳನ್ನು ಬಳಸಿ ಪೂಜೆ ಮಾಡುವಂತಹ ಲಕ್ಷಣಗಳು ಜಾಗದಲ್ಲಿ ಕಂಡು ಬಂದಿದ್ದು, ಸ್ಥಳೀಯರು ಜಾಗಕ್ಕೆ ಹೋಗುತ್ತಿದ್ದಂತೆ ವಾಮಾಚಾರ ಮಾಡುವ ಮಂತ್ರವಾದಿ ಸ್ಥಳದಿಂದ ಓಡಿ ಹೋಗಿದ್ದಾನೆ.
ಬಾಲಕಿಯನ್ನು ರಕ್ಷಣೆ ಮಾಡಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಐವರನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗೆ ಬಲೆಬೀಸಿದ್ದಾರೆ.