ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ. ಶರವೇಗದಲ್ಲಿ ಮುನ್ನುಗ್ಗಿ ಚಮತ್ಕಾರ, ಸಾಹಸ. ನೀಲಿ ಆಕಾಶದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳ ರಣ ರೋಚಕ, ಮೋಹಕ ಚಿತ್ತಾರ. ಮೊದಲ ದಿನದ ಏರ್ ಶೋ ಅಧ್ಬುತವಾಗಿತ್ತು.
ಹೌದು. ವಿಶ್ವದ ಮೊದಲ ಹೈಬ್ರೀಡ್ ಏರ್ ಶೋಗೆ ಬೆಂಗಳೂರು ಸಾಕ್ಷಿ ಆಗಿದ್ದು, ಇಂದು ಮತ್ತು ನಾಳೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ 2021 ಧ್ವಜಹೊತ್ತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಗಳು ಏರ್ ಶೋಗೆ ಚಾಲನೆ ನೀಡಿದವು. ಸೂರ್ಯಕಿರಣ್ ಹಾಗೂ ಸಾರಂಗ್ ಜಂಟಿ ಪ್ರದರ್ಶನ ಅಮೋಘವಾಗಿತ್ತು. 4 ಸಾರಂಗ್ ಹೆಲಿಕಾಪ್ಟರ್ ಗಳು, 9 ಸೂರ್ಯಕಿರಣ್ ಯುದ್ಧ ವಿಮಾನಗಳು ಬಾನಂಗಳದಲ್ಲಿ ಡೇಲ್ಟಾ ಫಾರ್ಮೇಷನ್‍ನಲ್ಲಿ ಹಾರಾಟ ನಡೆಸಿದವು.
ಸಾರಂಗ್ ಹೆಲಿಕಾಪ್ಟರ್ ಗಳು ವಜ್ರಾಕೃತಿ ರಚಿಸುತ್ತಾ ಡಾಗ್ ಫೈಟ್ ಮಾಡ್ತಾ ಮೈ ಜುಮ್ಮೆನಿಸುವ ಸಾಹಸದ ಪ್ರದರ್ಶನ ನಡೆಸಿದವು. ಇನ್ನೂ ಇದೇ ಮೊದಲ ಬಾರಿ ಅಮೆರಿಕಾದ ಬಿ1ಬಿ ಸೂಪರ್ ಸಾನಿಕ್ ಬಾಂಬರ್ ವಿಮಾನದ ಹಾರಾಟ ಸಖತ್ ಥ್ರಿಲ್ ನೀಡ್ತು. 28 ಗಂಟೆಗಳಲ್ಲಿ ಅಮೆರಿಕದಿಂದ ಭಾರತಕ್ಕೆ ತಲುಪಿದ ಬಿ1ಬಿ ಸೂಪರ್ ಸಾನಿಕ್ ಬಾಂಬರ್ ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಎಲ್ಲರ ಅಟ್ರಾಕ್ಷನ್ ಆಗಿತ್ತು.
ಈ ಬಾರಿ ಸುಖೋಯ್, ರಫೆಲ್, ತೇಜಸ್, ಸೂರ್ಯಕಿರಣ್, ಸಾರಂಗ್, ಜಾಗ್ವಾರ್, ಮಿಗ್ 2000, ಎಲ್ ಸಿ ಹೆಚ್ ಸೇರಿದಂತೆ ಹಲವು ಹೆಲಿಕಾಪ್ಟರ್, ವಿಮಾನಗಳು ಸಾಹಸದ ಪ್ರದರ್ಶನ ನೀಡಿದವು.