ಕೋಲಾರ: ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬಾನಾಮತಿ ಕಾಟ, ಅಗೋಚರ ಶಕ್ತಿಯ ಬೆಂಕಿಯಾಟ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ನಡೆಯುತ್ತಿರುವ ಬೆಂಕಿಯಾಟಕ್ಕೆ ಹುಲ್ಲಿನ ಮೆದೆಗಳು, ಚಪ್ಪರಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಮುಕ್ತಿ ಪಡೆಯಲು ಗ್ರಾಮಸ್ಥರು ಶಕ್ತಿ ದೇವತೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ.
ಜಿಲ್ಲೆಯ ಮುಳಬಾಗಿಲು ತಾಲೂಕು ಚಿನ್ನಹಳ್ಳಿ ಗ್ರಾಮದಲ್ಲಿ ಅಚಾನಕ್ಕಾಗಿ ನಡೆಯುತ್ತಿರುವ ಬೆಂಕಿಯಾಟಕ್ಕೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಜಾನುವಾರುಗಳ ಮೇವಿಗಾಗಿ ಹಾಕಿದ್ದ ಹುಲ್ಲಿನ ಮೆದೆಗಳು, ನೆರಳಿಗೆ ಹಾಕಿದ್ದ ಚಪ್ಪರಗಳಿಗೆ ಬೆಂಕಿ ಬೀಳುತ್ತಿದೆ. ಹದಿನೈದು ದಿನಗಳಲ್ಲಿ ಸುಮಾರು 14ಕ್ಕೂ ಹೆಚ್ಚು ಹುಲ್ಲಿನ ಮೆದೆಗಳು ಸುಟ್ಟು ಭಸ್ಮವಾಗುತ್ತಿವೆಯಂತೆ, ಇದರಿಂದ ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ.
ಇದೇ ರೀತಿಯ ಘಟನೆ ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಡೆದಿತ್ತಂತೆ. ಆಗ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನೇಮಕ ಮಾಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದರು. ಆಗ ಯಾರೋ ನೀಡಿದ ಸಲಹೆ ಮೇರೆಗೆ ಊರಿನಲ್ಲಿ ಶಕ್ತಿದೇವರಿಗೆ ಪೂಜೆ ಮಾಡಿದ್ದರು. ನಂತರ ಗ್ರಾಮದಲ್ಲಿ ಇಂತಹ ದುರ್ಘಟನೆ ಮರುಕಳಿಸಿರಲಿಲ್ಲ. ಈಗ ಕಳೆದ ಹದಿನೈದು ದಿನಗಳಿಂದ ಗ್ರಾಮದಲ್ಲಿ ಅದೇ ರೀತಿಯ ಘಟನೆಗಳು ಮರುಕಳಿಸಲು ಆರಂಭಿಸಿವೆ. ಹೀಗಾಗಿ ಗ್ರಾಮದ ಜನ ಮತ್ತೆ ಶಕ್ತಿ ದೇವರ ಮೊರೆ ಹೋಗಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ ಗ್ರಾಮದಲ್ಲಿ ಇದ್ದಕ್ಕಿದಂತೆ ಹುಲ್ಲಿನ ಮೆದೆಗಳಿಗೆ ಬೆಂಕಿ ಬೀಳುತ್ತಿದ್ದರಿಂದ ಜನರು ಬೆಚ್ಚಿ ಬಿದ್ದಿದ್ದರು. ಮೆದೆಯ ಬಳಿ ಕಾವಲು ಕೂತರೂ ಅದ್ಯಾವುದೋ ಕಡೆಯಿಂದ ಬೆಂಕಿ ಬಂದು ಹುಲ್ಲಿನ ಮೆದೆಗಳನ್ನು ಸುಟ್ಟು ಭಸ್ಮ ಮಾಡುತ್ತಿತ್ತು. ಗ್ರಾಮಸ್ಥರು ಎಂದಿನಂತೆ ತಂತ್ರ ವಿದ್ಯೆ ಗೊತ್ತಿರುವ ಮಾಂತ್ರಿಕರ ಬಳಿ ಕೇಳಿದ್ದರು. ಆಗ ಹಿಂದೆ ಯಾವುದೋ ಬುಡ್ ಬುಡಿಕೆಯವರು ಅಥವಾ ಭಿಕ್ಷುಕರು ಕೊಟ್ಟ ಶಾಪದ ಪರಿಣಾಮ ಹೀಗಾಗುತ್ತಿದೆ. ಇದೊಂದು ಬಾನಾಮತಿ ರೀತಿಯ ಪ್ರಯೋಗ ಎಂದು ತಿಳಿಸಿದ್ದರು.
ಆಗ ಗ್ರಾಮಸ್ಥರೆಲ್ಲರೂ ಸೇರಿ ಈ ನಿಗೂಢ ಬೆಂಕಿಯಾಟಕ್ಕೆ ಕೊನೆಗಾಣಿಸಬೇಕೆಂದು ನಿರ್ಧರಿಸಿ ಗ್ರಾಮದಲ್ಲಿ ಶಕ್ತಿ ದೇವರು ಹಾಗೂ ಗ್ರಾಮ ದೇವರಿಗೆ ಪೂಜೆ ಮಾಡಿ, ಶಕ್ತಿ ದೇವರಿಗೆ ಬಲಿ ಕೊಟ್ಟು, ಗ್ರಾಮಕ್ಕೆ ಅಷ್ಟದಿಗ್ಬಂಧನ ಮಾಡಿ ಶಾಂತಿ ಮಾಡಿಸಿದ್ದಾರೆ. ಊರ ಜನರೆಲ್ಲಾ ಸೇರಿ ಭಕ್ತಿಯಿಂದ ಊರಿಗೆ ಯಾವುದೇ ಕೆಡುಕಾಗದಂತೆ ಭದ್ರಕಾಳಿ ಉಪಾಸಕ ಡಾ.ಜೆಮಿನಿ ರಮೇಶ್ ಅವರನ್ನ ಕರೆಸಿ ಶಾಂತಿ ಮಾಡಿದ್ದಾರೆ. ಇನ್ನು ಮುಂದೆ ಗ್ರಾಮದಲ್ಲಿ ಇಂತಹ ಘಟನೆ ನಡಯದಂತೆ ಗಂಗಮ್ಮ ದೇವಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.