– 9 ತಿಂಗಳಿನಿಂದ ಬಾಡಿಗೆ ನೀಡದ ಕುಟುಂಬ
ಬೆಂಗಳೂರು: ಬಾಡಿಗೆ ಹಣ ಕೇಳಿದ ಮನೆಯ ಒಡತಿಯನ್ನ ಬಾಡಿಗೆದಾರರು ಕೊಲೆಗೈದಿರುವ ಘಟಬನೆ ಬೆಂಗಳೂರಿನಲ್ಲಿ ವಿವಿಪುರಂನಲ್ಲಿ ನಡೆದಿದೆ.
ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿ ಕೊಲೆಯಾದ ಮಹಿಳೆ. ರಾಜೇಶ್ವರಿ ಅವರು ಬೆಂಗಳೂರಿನ ವಿವಿಪುರ ಠಾಣಾ ವ್ಯಾಪ್ತಿಯ ಪಾರ್ವತಿಪುರದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸಿದ್ದರು. ಈ ಮನೆಯನ್ನ ಆಟೋ ಡ್ರೈವರ್ ಆಗಿದ್ದ ಅಲೀಂ ಪಾಷಾ ಎಂಬಾತನಿಗೆ ಬಾಡಿಗೆಗೆ ನೀಡಿದ್ದರು. ಇದೇ ಸಮಯದಲ್ಲಿ ಲಾಕ್‍ಡೌನ್ ಆಗಿದ್ದರಿಂದ ಮಾನವೀಯತೆ ದೃಷ್ಟಿಯಿಂದ ರಾಜೇಶ್ವರಿ ಒಂದೆರಡು ತಿಂಗಳ ಬಾಡಿಗೆ ಹಣ ಸಹ ಕೇಳಿರಲಿಲ್ಲ.
ರಾಜೇಶ್ವರಿ ಅವರ ಒಳ್ಳೆಯತನವನ್ನ ಬಂಡವಾಳವನ್ನಾಗಿ ಮಾಡಿಕೊಂಡ ಅಲೀಂ ಪಾಷಾ, ಕಳೆದ 9 ತಿಂಗಳಿನಿಂದ ಬಾಡಿಗೆ ಹಣ ನೀಡದೇ ಸತಾಯಿಸಿಕೊಂಡು ಬಂದಿದ್ದಾರೆ. ಎರಡು ದಿನಗಳ ಹಿಂದೆ ಮಧ್ಯಾಹ್ನ ಬಾಡಿಗೆದಾರನ ಮನೆಗೆ ಹೋದ ರಾಜೇಶ್ವರಿ, ಹಣ ನೀಡಿ, ಇಲ್ಲವಾದ್ರೆ ಇಲ್ಲಿಂದ ಹೋಗಿ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವಿಷಯವಾಗಿ ರಾಜೇಶ್ವರಿ ಮತ್ತು ಅಲೀಂ ಪಾಷಾ ನಡುವೆ ಜಗಳ ನಡೆದಿದ್ದು, ಗಾಂಜಾ ಮತ್ತಿನಲ್ಲಿದ್ದ ಅಲೀಂ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೆಲ ಸಮಯದ ನಂತರ ಅಲೀಂ ಪಾಷನಿಗೆ ತಾನು ಮಾಡಿದ ಕೃತ್ಯದ ಬಗ್ಗೆ ಅರಿವಾಗಿತ್ತು. ತಕ್ಷಣ ಚಿಕ್ಕಮ್ಮ ಅಶ್ರಫನೀಸಾ ಹಾಗೂ ಸಹೋದರ ಜರೇನ್ ಪಾಷಾಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ಮಧ್ಯಾಹ್ನವಾಗಿದ್ದ ಕಾರಣ ಅಕ್ಕಪಕ್ಕದಲ್ಲಿ ಯಾರಿಗೂ ಅನುಮಾನ ಬಾರದ ರೀತಿ ದೇಹವನ್ನು ಮೂಟೆಕಟ್ಟಿ ಬಿಡದಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿ ಎಸ್ಕೇಪ್ ಆಗಿದ್ದರು.
ಬಾಡಿಗೆ ತಗೆದುಕೊಂಡು ಬರ್ತಿನಿ ಅಂತಾ ಹೋದ ರಾಜೇಶ್ವರಿ ರಾತ್ರಿ ಆದ್ರೂ ಮನೆಗೆ ಬರದಿದ್ದಾಗ ಕುಟುಂಬಸ್ಥರು ವಿವಿ ಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ದಾಖಲು ಮಾಡಿದ್ದರು. ತನಿಖೆಗೆ ಇಳಿದ ಪೊಲೀಸರಿಗೆ ಬಾಡಿಗೆದಾರನ ಮೇಲೆ ಅನುಮಾನ ಬಂದಿತ್ತು. ಠಾಣೆಗೆ ಕರ್ಕೊಂಡು ಹೋಗಿ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದ್ದೆ ತಡ ಎಲ್ಲವನ್ನೂ ಅಲೀಂ ಪಾಷಾ ಬಾಯಿ ಬಿಟ್ಟಿದ್ದಾನೆ. ಅಲೀಂ ಪಾಷ, ಚಿಕ್ಕಮ್ಮ ಅಶ್ರಫನೀಸಾ ಸಹೋದರ ಜರೇನ್ ಪಾಷಾ ಪರಪ್ಪನ ಅಗ್ರಹಾರ ಸೇರಿದ್ದಾರೆ.