ಬಾಗಲಕೋಟೆ: ಬಾಗಲಕೋಟೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಅದರಂತೆ ಹೆಚ್ಚು ಜನ ಗುಣಮುಖ ಸಹ ಆಗುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನರಲ್ಲಿ ಸೋಂಕು ಪತ್ತೆಯಾಗಿ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದರ ಮಧ್ಯೆ ಇಂದು ಆರು ಜನ ಸಂಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿದ್ದಾರೆ.
ಒಂದೇ ದಿನ ಆರು ಜನ ಡಿಸ್‍ಚಾರ್ಜ್ ಆಗಿದ್ದು, ಇದರಿಂದಾಗಿ ಜಿಲ್ಲೆಯ ಜನರ ಕೊಂಚ ಸಮಾಧಾನಪಟ್ಟುಕೊಂಡಿದ್ದಾರೆ. ರೋಗಿ ಸಂಖ್ಯೆ 456, 508, 509, 521, 522, 523 ಇಂದು ಬಿಡುಗಡೆಯಾಗಿದ್ದಾರೆ.
ಏಪ್ರಿಲ್ 28ರಂದು ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ರೋಗಿಗಳೆಲ್ಲ ಜಮಖಂಡಿ ನಗರದವರು. ಡಿಸ್‍ಚಾರ್ಜ್ ಆದ ರೋಗಿಗಳಿಗೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ, ಹೂಗುಚ್ಛ ನೀಡಿ ಬಿಳ್ಕೊಟ್ಟರು. ಬಿಡುಗಡೆಯಾದವರಲ್ಲಿ ರೋಗಿ ನಂ.509 ಮಹಿಳೆ ತನ್ನ ಮಗು ಸಮೇತ ಕೋವಿಡ್ ಆಸ್ಪತ್ರೆಯಲ್ಲಿದ್ದರು. ಮಗುವಿಗೆ ಸೋಂಕು ತಗುಲಿರಲಿಲ್ಲ. ಆದರೂ ಚಿಕ್ಕ ಮಗುವಾದ್ದರಿಂದ ತಾಯಿ ಜೊತೆ ಇರಿಸಲಾಗಿತ್ತು. ಇದೀಗ ತಾಯಿ ಮಗುವನ್ನು ಡಿಸ್‍ಚಾರ್ಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಗುಣಮುಖರಾಗಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಕೊರೊನಾ ಬಿರುಗಾಳಿ ಬೀಸಿದ್ದು, ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕೊರೊನಾ ಬಾಂಬ್ ಸ್ಪೋಟಗೊಂಡಿದೆ. ಮುಧೋಳ ನಗರದವೊಂದರಲ್ಲೇ ಇಂದು ಒಂದೇ ದಿನಕ್ಕೆ 15 ಜನರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು 68 ಜನರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.