ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

Public TV
2 Min Read
tim paine run out 1

– ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌
– ಭಾರತ 1 ವಿಕೆಟ್‌ ನಷ್ಟಕ್ಕೆ 36 ರನ್‌

ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ 11 ವಿಕೆಟ್‌ಗಳು ಪತನಗೊಂಡಿದೆ. ಈ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಟಿಮ್ ಪೈನೆ ರನೌಟ್‌ ನೀಡದಿರುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟ್‌ ಆಯ್ತು.

tim paine run out 2

ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಅಶ್ವಿನ್‌ 35 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಟೆಸ್ಟ್‌ ಪಂದ್ಯವಾಡಿದ ಮೊಹಮ್ಮದ್‌ ಸಿರಾಜ್‌ 40 ರನ್‌ ನೀಡಿ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದರೇನು? ಯಾಕೆ ಈ ಹೆಸರು ಬಂತು?

ಆಸ್ಟ್ರೇಲಿಯಾದ ಪರವಾಗಿ ಮ್ಯಾಥ್ಯೂ ವೇಡ್‌ 30 ರನ್‌, ಮಾರ್ನಸ್‌ ಲಬುಶೇನ್‌ 48 ರನ್‌, ಟ್ರಾವಿಸ್‌ ಹೆಡ್‌ 38 ರನ್‌, ನಥನ್‌ ಲಿಯಾನ್‌ 20 ರನ್‌ ಹೊಡೆದರು.

ಅಶ್ವಿನ್‌ ಎಸೆದ 55ನೇ ಓವರಿನ ಕೊನೆಯ ಎಸೆತವನ್ನು ಕ್ಯಾಮರಾನ್‌ ಗ್ರೀನ್‌ ಆಫ್‌ ಸೈಡಿಗೆ ಹೊಡೆದು ಓಡಿದರು. ಈ ವೇಳೆ ಬಾಲ್‌ ಉಮೇಶ್‌ ಯಾದವ್‌ ಕೈ ಸೇರಿತ್ತು. ಯಾದವ್‌ ನೇರವಾಗಿ ಕೀಪರ್‌ ರಿಷಬ್‌ಪಂತ್‌ಗೆ ಎಸೆದರು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

ರಿಪ್ಲೇಯಲ್ಲಿ ಬೇಲ್ಸ್‌ ಹಾರುವ ಸಮಯದಲ್ಲಿ ಬ್ಯಾಟ್‌ ಗೆರೆಯಿಂದ ಹಿಂದೆ ಇರುವುದು ಸ್ಪಷ್ಟವಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ನಡೆಯುತ್ತಿದೆ.

ಆರಂಭದಲ್ಲೇ ಕುಸಿತ:
ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿದ್ದು 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಆರಂಭಿಕ ಆಟಗಾರ ಮಾಯಂಕ್‌ ಅಗರವ್‌ವಾಲ್‌ ಮೊದಲ ಓವರಿನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯ ಆಡುತ್ತಿರುವ ಶುಭಮನ್‌ ಗಿಲ್‌ 28 ರನ್‌ ಚೇತೇಶ್ವರ ಪೂಜಾರ 7 ರನ್‌ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *