– ಯಾರೇ ವಿರೋಧಿಸಿದ್ರೂ ಪುಸ್ತಕ ಬಿಡುಗಡೆ ನಿಲ್ಲಲ್ಲ
ಮೈಸೂರು: ಮಾಜಿ ಸಚಿವ ಎಚ್.ವಿಶ್ವನಾಥ್ ‘ಬಾಂಬೆ ಡೇಸ್’ ಎಂಬ ಪುಸ್ತಕ ಬರೆಯುತ್ತಿದ್ದಾರೆ. ಮೈತ್ರಿ ಸರ್ಕಾರ ಪತನದ ಕುರಿತು ಪುಸ್ತಕ ಇದ್ದಾಗಿದೆ. ಹೀಗಾಗಿ ಅನೇಕ ಸತ್ಯಗಳು ಸ್ಫೋಟಗೊಳ್ಳಲಿವೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇದಕ್ಕೆ ಯಾರ ಪಾತ್ರವೇನು. ಏನೆಲ್ಲಾ ಘಟನೆಗಳು ನಡೆದವು ಎಂಬ ವಿಚಾರವನ್ನು ಬಾಂಬೆ ಡೇಸ್ ಪುಸ್ತಕದಲ್ಲಿ ಬರೆಯುತ್ತೇನೆ ಎಂದರು.
Advertisement
Advertisement
2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಸೇರಿ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರ ಸರ್ಕಾರವನ್ನು ಪತನಗೊಳಿಸಿದ್ದರು. ಅಂದು ಮತ್ತೊಂದು ಸರ್ಕಾರ ರಚನೆ ಮಾಡಿದರು. ಅದರಂತೆ ಈಗ ನಡೆದ ರಾಜಕೀಯ ಕ್ರಾಂತಿಯನ್ನು ಸಾಹಿತಿಯಾಗಿ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. 17 ಜನ ಶಾಸಕರು ಬಿಜೆಪಿಗೆ ಸೇರಿದರು ಎನ್ನುವುದನ್ನು ತೆರೆದಿಡುತ್ತೇನೆ ಎಂದು ತಿಳಿಸುತ್ತೇನೆ.
Advertisement
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ಎಲ್ಲರ ಹೆಸರನ್ನು ಯಥಾವತ್ತಾಗಿ ಬರೆಯುತ್ತೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾರದರ್ಶಕವಾಗಿ ರಾಜಕಾರಣ ಮಾಡಿದ್ದೇನೆ. ಹೀಗಾಗಿ ಯಾವುದೇ ಹೆಸರು, ವಿಚಾರವನ್ನು ಮುಚ್ಚಿಡುವ ಮಾತೇ ಇಲ್ಲ ಎಂದು ತಿಳಿಸಿದರು.
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ಮುಹೂರ್ತ ನಿಗದಿ ಮಾಡಿದ್ದು ಯಾರು? ಎಲ್ಲೆಲ್ಲಿ ಸಭೆ ನಡೆದವು, ಸಭೆಯಲ್ಲಿ ಇದ್ದವರು ಯಾರು ಎಂಬದನ್ನು ಹೆಸರು ಸಮೇತ ಬರೆಯುತ್ತೇನೆ. ಕೆಲವೇ ವಾರಗಳಲ್ಲಿ ಅದರ ಕೆಲವು ಅಧ್ಯಾಯಗಳನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳುತ್ತೇನಿ. ಈ ಪುಸ್ತಕ ವಿವಾದವಾದರೆ ಅದಕ್ಕೆ ನಾನು ಹೊಣೆಯಲ್ಲ. ಸತ್ಯ ಹೇಳುವುದಷ್ಟೆ ನನ್ನ ಕೆಲಸ. ಯಾರೇ ವಿರೋಧ ಮಾಡಿದರು ಈ ಪುಸ್ತಕ ಬಿಡುಗಡೆ ನಿಲ್ಲುವುದಿಲ್ಲ. ಈ ಪುಸ್ತಕದಿಂದ ಸರ್ಕಾರಕ್ಕೆ ಸಮಸ್ಯೆ ಆಗಲ್ಲ ಎಂದು ವಿಶ್ವನಾಥ್ ಹೇಳಿದರು.