ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ದಾಂಧಲೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಪೊಲೀಸ್ ಠಾಣೆಯ ಪೊಲೀಸರ ಕಾರುಗಳು ಮತ್ತು 50ಕ್ಕೂ ಹೆಚ್ಚು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೇ ಪೊಲೀಸ್ ಠಾಣೆಯ ಪೀಠೋಪಕರಣಗಳು ಮತ್ತು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.
ಮೊದಲಿಗೆ ಗಲಭೆಯ ಸ್ಪಾಟ್‍ಗೆ ಹೋಗೋಕೆ ಹೋದ ಡಿಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನ ಪುಡಿ ಪುಡಿ ಮಾಡಿದ್ದಾರೆ. ಆ ಬಳಿಕ ಕೆಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನು ಹೊಡೆದು ಹಾಕಿದ್ದಾರೆ. ಇತ್ತ ಸ್ಪಾಟ್‍ಗೆ ಬರುತ್ತಿದ್ದ ಬಾಣಸವಾಡಿ ಎಸಿಪಿ ಜೀಪನ್ನು ಸಹ ಪುಡಿ ಪುಡಿ ಮಾಡಿದ್ದಾರೆ. ಎಸಿಪಿ ನಂತರ ಡಿಸಿಪಿ ಪೂರ್ವ ವಿಭಾಗದ ಶರಣಪ್ಪರ ಕಾರು ಕೂಡ ಪುಡಿ ಪುಡಿ ಆಗಿದೆ.
ಹೆಚ್ಚಿನ ಪೋರ್ಸ್ ಸ್ಪಾಟ್‍ಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸ್ಪಾಟ್‍ಗೆ ಬರುತ್ತಿದ್ದ ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಕಾರು ಜಖಂ ಮಾಡಿದ್ದಾರೆ. ಬಳಿಕ ಸ್ಪಾಟ್‍ಗೆ ಬಂದ ಕೆಎಸ್‌ಆರ್‌ಪಿ ಗರುಡ ಪಡೆ, ಫೈರ್ ವಾಹನಗಳಿಗೂ ಕಲ್ಲು ತೂರಿ ಜಖಂ ಮಾಡಿದ್ದಾರೆ.
ದುಷ್ಕರ್ಮಿಗಳು ದಾಂಧಲೆ ನಡೆಸಿದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿಗಳನ್ನ ಧ್ವಂಸ ಮಾಡಿದ್ದಾರೆ. ಇತ್ತ ಕಾವಲ್ ಬೈರಸಂದ್ರದ ಪ್ರತಿರಸ್ತೆಯಲ್ಲೂ ನೀರವ ಮೌನ ಆವರಿಸಿದೆ. ಇದರಿಂದ ಭಯಗೊಂಡ ಸ್ಥಳೀಯರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುತ್ತಿದ್ದಾರೆ.
ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್ ಮತ್ತು 110 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೀವಿ. ದಯಮಾಡಿ ಶಾಂತಿಯನ್ನು ಕಾಪಾಡಿ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಬೆಂಗಳೂರಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಡಿ.ಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ನನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಇತರೆ 110 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿ.
— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) August 12, 2020