ಬೆಳಗಾವಿ: ರೈತ ಸಂಘಟನೆಗಳಿಂದ ಇಂದು ಕರ್ನಾಟಕ ಬಂದ್‍ಗೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ರೈತನೊಬ್ಬ ಬಸ್‍ಗಳ ಸಂಚಾರ ಸ್ಥಗಿತಗೊಳಿಸುವಂತೆ ಅಧಿಕಾರಿ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ.
ಈ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ರೈತ ಮುಖಂಡ ಚೂನಪ್ಪ ಅವರು NWKSRTC ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಕಾಲಿಗೆ ಬಿದ್ದಿದ್ದಾರೆ.
ಬೆಳಗ್ಗೆ ಬಸ್ ನಿಲ್ದಾಣದ ಎದುರು ರೈತಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನಾಕಾರರು ತೆರಳಿದ ಮೇಲೆ ಪೊಲೀಸ್ ಭದ್ರತೆಯಲ್ಲಿ ಬಸ್ಸುಗಳ ಸಂಚಾರ ಆರಂಭಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ, ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಎನ್‍ಡಬ್ಯುಕೆಎಸ್‍ಆರ್‍ಟಿಸಿ ಡಿಸಿ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾರೆ.
ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಬಂದ್ ವೇಳೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಟೈಯರ್‍ಗೆ ಬೆಂಕಿ ಹಚ್ಚಲು ಯತ್ನಿಸಲಾಗಿತ್ತು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆಗಳ ಧರಣಿ ವೇಳೆ ಟೈಯರ್ ಕಿತ್ತುಕೊಳ್ಳಲು ಹೋಗಿ ಪೊಲೀಸೊಬ್ಬರು ನೆಲಕ್ಕೆ ಬಿದ್ದಿದ್ದಾರೆ. ಕಡೆಗೂ ಪೊಲೀಸರು ಹರಸಾಹಸ ಮಾಡಿ ಟೈಯರ್ ಕಿತ್ತುಕೊಂಡರು.