ಚಾಮರಾಜನಗರ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಾರಿಗೆ ಸಂಸ್ಥೆಯ ಚಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಘಟನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಕಾರಣವಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ಚಾಮರಾಜನಗರ ಜಿಲ್ಲಾ ರೈತ ಸಂಘದ(ಒರಿಜಿನಲ್) ಅಧ್ಯಕ್ಷ ಕೆ.ಎಂ.ಮಾದಪ್ಪ ದೂರು ನೀಡಿದ್ದಾರೆ.
ಮುಷ್ಕರದ ನೇತೃತ್ವ ವಹಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಈ ಘಟನೆಗೆ ಕಾರಣವಾಗಿದ್ದು, ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ದೂರು ನೀಡಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ಸಂಚು ಹಾಗೂ ಪಿತೂರಿಯಿಂದ ರೈತರು ಈಗಾಗಲೇ ವಂಚನೆಗೆ ಒಳಗಾಗಿದ್ದಾರೆ. ಇದೀಗ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರ ವಿಷಜಾಲಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಎಂ.ಮಾದಪ್ಪ ಆರೋಪಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ನೀಡಿ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ರೈತರು ಹೂ, ಹಣ್ಣು, ತರಕಾರಿ, ರೇಷ್ಮೆ ಮತ್ತಿತರ ಬೆಳೆಗಳ ಸಾಗಾಟಕ್ಕೆ ಸಾರಿಗೆ ಬಸ್ ಗಳನ್ನೇ ಅವಲಂಬಿಸಿದ್ದರು. ಆದರೆ ಈಗ ಸಾರಿಗೆ ನೌಕರರ ಮುಷ್ಕರದಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಚಾಲಕ ನಬೀದ್ ರಸೂಲ್ ಕೆ.ಅವಟಿ ಅವರು ಗಂಭೀರವಾಗಿ ಗಾಯಗೊಂಡು, ಮೃತಪಟ್ಟ ಘಟನೆ ನಡೆದಿದೆ.