ಬಸ್ಸು ಬೇಡ, ಸಮಸ್ಯೆಯೂ ಬೇಡ- ನಿತ್ಯ ಕುದುರೆ ಏರಿ ಶಾಲೆಗೆ ತೆರಳುವ 12ರ ಪೋರ

Public TV
2 Min Read
school boy horse

ಭೋಪಾಲ್: ಮಧ್ಯ ಪ್ರದೇಶದ 12 ವರ್ಷದ ವಿದ್ಯಾರ್ಥಿ ಕುದುರೆ ಏರಿ ಶಾಲೆಗೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಈ ಮೂಲಕ ಶಾಲೆಗೆ ತೆರಳುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದಾನೆ.

ಮಧ್ಯ ಪ್ರದೇಶದ ಖಂದ್ವಾದ 12 ವರ್ಷದ ವಿದ್ಯಾರ್ಥಿ ಬಸ್ ಸಮಸ್ಯೆಯಿಂದ ಬೇಸತ್ತು, ತಾನೇ ಕುದುರೆ ಏರಿ ಶಾಲೆಗೆ ತೆರಳುವ ಮೂಲಕ ಬದ್ಧತೆ ಪ್ರದರ್ಶಿಸಿದ್ದಾನೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಪ್ರತಿ ನಿತ್ಯ ಶಾಲೆಗೆ ತೆರಳಲು ವಿದ್ಯಾರ್ಥಿ ಕುದುರೆಯನ್ನು ಬಳಸುತ್ತಾನೆ.

school boy horse 2

ಜಿಲ್ಲಾ ಕೇಂದ್ರವಾದ ಖಂದ್ವಾದಿಂದ ಸುಮಾರು 60 ಕಿ.ಮೀ.ದೂರದಲ್ಲಿರುವ ಬೊರಾಡಿ ಮಾಲ್ ಸಣ್ಣ ಹಳ್ಳಿಯಾಗಿದ್ದು, ರೈತ ದೇವರಾಮ್ ಯಾದವ್ ಅವರ ಪುತ್ರ ಶಿವರಾಜ್ 5ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನ ಶಾಲೆ ತನ್ನ ಊರಿನಿಂದ 6 ಕಿ.ಮೀ. ದೂರದಲ್ಲಿದೆ. ಲಾಕ್‍ಡೌನ್ ಬಳಿಕ ಶಾಲೆಯ ತರಗತಿಗಳು ಆರಂಭವಾದ ನಂತರ ಶಿವರಾಜ್ ಶಾಲೆಗೆ ತೆರಳಲು ತುಂಬಾ ಕಷ್ಟಪಡುತ್ತಿದ್ದ. ಕೆಲ ದಿನಗಳ ಹಿಂದೆ ಶಿವರಾಜ್ ತಂದೆ ಕುದುರೆ ತಂದಿದ್ದರು. ಬಳಿಕ ಶಿವರಾಜ್ ಆಗಾಗ ಕುದುರೆ ಸವಾರಿ ಮಾಡುತ್ತಿದ್ದ, ಹೀಗಾಗಿ ಪ್ರಾಣಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದ. ಇದೀಗ ಶಾಲೆಗೆ ತೆರಳಲು ಬೇರೆ ಯಾವುದೇ ಆಯ್ಕೆ ಇಲ್ಲದ್ದರಿಂದ ಶಿವರಾಜ್ ತನ್ನ ತಂದೆಯ ಅನುಮತಿ ಪಡೆದು ಕುದರೆ ಏರಿಯೇ ಪ್ರತಿ ದಿನ ಶಾಲೆಗೆ ಹೊರಟಿದ್ದಾನೆ.

ಆರಂಭದಲ್ಲಿ ಸೈಕಲ್ ತೆಗೆದುಕೊಂಡು ಶಾಲೆಗೆ ಹೋಗುತ್ತಿದ್ದ, ಆದರೆ ರಸ್ತೆ ಸರಿ ಇಲ್ಲದ ಕಾರಣ ಬಿದ್ದು ಗಾಯ ಮಾಡಿಕೊಂಡಿದ್ದ. ಹೀಗಾಗಿ ಇದೀಗ ಪ್ರತಿ ನಿತ್ಯ ಕುದುರೆ ರಾಜಾನ ಮೇಲೆ ಶಾಲೆಗೆ ತೆರಳುತ್ತಿದ್ದಾನೆ.

school boy horse 3

ಶಿವರಾಜ್‍ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸ್ಫೂರ್ತಿ, ಅಲ್ಲದೆ ಅವರಿಂದ ತುಂಬಾ ಕಲಿತಿದ್ದಾನಂತೆ. ಶಾಲೆಯಲ್ಲಿ ಸಹ ಓದಿನಲ್ಲಿ ಮುಂದಿದ್ದು, ಬುದ್ಧಿವಂತ ಹುಡುಗ ಎಂದು ಶಾಲೆಯ ಶಿಕ್ಷಕರು ಕೊಂಡಾಡಿದ್ದಾರೆ. ಶಾಲೆಯ ಸಿಬ್ಬಂದಿ ಹಾಗೂ ಇತರ ಮಕ್ಕಳು ರಾಜಾ ಬಗ್ಗೆ ಒಲವು ತೋರುತ್ತಾರೆ. ಏಕೆಂದರೆ ಶಿವರಾಜ್ ತರಗತಿಗೆ ಹಾಜರಾದಾಗ ಕುದುರೆ ರಾಜಾ ಪ್ರತಿ ದಿನ ಮೈದಾನದಲ್ಲಿ ಕಾಯುತ್ತಿರುತ್ತಾನೆ.

ಓದಿನಲ್ಲಿ ತಮ್ಮ ಮಗ ಹೊಂದಿರುವ ಆಸಕ್ತಿ, ಬದ್ಧತೆಯನ್ನು ಕಂಡು ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತೇನೆ. ಹೀಗಾಗಿ ನನ್ನ ಮಗ ಓದಿನಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಶಿವರಾಜ್ ತಂದೆ ದೇವರಾಮ್ ತಿಳಿಸಿದ್ದಾರೆ.

SCHOOL 768x430 1

ದೇಶದ ವಿವಿಧ ಭಾಗಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಆದರೆ ಬಹುತೇಕ ಶಾಲೆಗಳಲ್ಲಿ ಬಸ್‍ಗಳ ಸಂಚಾರವನ್ನು ಆರಂಭಿಸಿಲ್ಲ. ವಿದ್ಯಾರ್ಥಿಗಳಿಗೆ ಇದು ಭಾರೀ ತಲೆನೋವಾಗಿ ಪರಿಣಮಿಸಿದ್ದು, ಪ್ರತಿ ನಿತ್ಯ ಹೆಚ್ಚು ದುಡ್ಡು ನೀಡಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಆಗುತ್ತಿಲ್ಲ. ಹೀಗಾಗಿ ಈ ರೀತಿಯ ಉಪಾಯಗಳನ್ನು ಹುಡುಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *